ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟಿಸಲು ಸಾಹಿತಿ ಹಂಪ ನಾಗರಾಜಯ್ಯ (Hampa Nagarajaiah) ಅವರಿಗೆ ಆಹ್ವಾನ ನೀಡಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅ. 3ರಂದು ಮೈಸೂರು ದಸರಾಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಮೈಸೂರು ದಸರಾಗೆ ತಯಾರಿ ನಡೆದಿದೆ. ಈಗಾಗಲೇ ಗಜಪಡೆ ತಾಲೀಮು ಆರಂಭವಾಗಿದೆ. ಈ 2024ರ ದಸರಾ ಮಹೋತ್ಸವ ಅಕ್ಟೋಬರ್ 3ರಿಂದ 12ರ ವರೆಗೆ ನಡೆಯಲಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆಯಾಗಲಿದೆ.
ಅಕ್ಟೋಬರ್ 3ರಂದು ಚಾಮುಂಡೇಶ್ವರಿ ದೇವಿಗೆ ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದೆ. ನಂತರ 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಅಕ್ಟೋಬರ್ 12ರಂದು ನವಮಿಯ ದಿನ ದುರ್ಗಾಷ್ಟಮಿ, ಮಹಾನವಮಿ, ಆಯುಧ, ಆನೆ ಮತ್ತು ಕುದುರೆ ಪೂಜೆ ನೆರವೇರಲಿದೆ.
ಅಕ್ಟೋಬರ್ 13ರಂದು ವಿಜಯ ದಶಮಿ ಪೂಜೆ ನೆರವೇರಲಿದೆ. ಸಂಜೆ 4.30ರ ನಂತರ ಜಂಬೂ ಸವಾರಿ ನಡೆಯಲಿದ್ದು, ರಾತ್ರಿ 7.30ರ ನಂತರ ಪಂಜಿನ ಕವಾಯತು ನಡೆಯಲಿದೆ. ಹಿಂದಿನ ವರ್ಷ ಸರಳ ದಸರಾ ಆಚರಿಸಲಾಗಿತ್ತು. ಆದರೆ, ಈ ಬಾರಿ ಉತ್ತಮ ಮಳೆಯಾಗಿದ್ದರಿಂದಾಗಿ ಅದ್ದೂರಿಯಾಗಿ ಆಚರಿಸಲು ಸಿಎಂ ಘೋಷಿಸಿದ್ದಾರೆ.