ನವದೆಹಲಿ: ಕುಸ್ತಿಪಟು ಸಾಗರ್ ಧನ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಎರಡು ಒಲಿಂಪಿಕ್ ಪದಕ ವಿಜೇತ ಕುಮಾರ್ ಸುಶೀಲ್ ಕುಮಾರ್ಗೆ (Sushil Kumar) ಜಾಮೀನು ನೀಡಿದೆ. ಮಂಗಳವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ.
2021ರ ಮೇ ತಿಂಗಳಿನಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಅವರನ್ನು ಹಲ್ಲೆಮಾಡಿ ಕೊಂದ ಆರೋಪದ ಮೇಲೆ ಸುಶೀಲ್ ಕುಮಾರ್ ಬಂಧನಕ್ಕೆ ಒಳಗಾಗಿದ್ದ. 2023ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ 7 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿತ್ತು. ಅದಾಗಿ ಮತ್ತೆ ಜೈಲು ಸೇರಿದ್ದ.
2021ರ ಮೇ 4ರಂದು ಛತ್ರಸಾಲ್ ಕ್ರೀಡಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಸಾಗರ್ ಧನ್ಕರ್ ಕೊಲೆ ಮಾಡಲಾಗಿತ್ತು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸುಶೀಲ್ ಕುಮಾರ್ ಹಲ್ಲೆ ಮಾಡಿದ್ದರು. ಕೊಲೆ ಕೇಸ್ ದಾಖಲಾದ ಬಳಿಕ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದರು. ಕೆಲವು ದಿನಗಳ ನಂತರ ಪೊಲೀಸರು ಅವರನ್ನು ಬಂಧಿಸಿ ಹತ್ಯೆಯ ಪ್ರಮುಖ ಆರೋಪಿಯಾಗಿ ದೆಹಲಿ ಪೊಲೀಸರು 170 ಪುಟಗಳ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸುಶೀಲ್ ಕುಮಾರ್ ಅವರು ಮೂರು ವಾರಗಳ ಕಾಲ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದರು. ಪ್ರತಿದಿನ ವಾಸಸ್ಥಳ ಬದಲಾಯಿಸುತ್ತಿದ್ದ ಅವರು ಸಿಮ್ ಕಾರ್ಡ್ ಗಳನ್ನು ಪದೇ ಪದೇ ಬದಲಾಯಿಸುತ್ತಿದ್ದರು. ಇದರಿಂದಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಬೇಕಾಯಿತು ಮತ್ತು ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಬೇಕಾಯಿತು. ಅಂತಿಮವಾಗಿ, ಸುಶೀಲ್ ಕುಮಾರ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು, ಆದರೆ ನ್ಯಾಯಾಲಯವು ಅದನ್ನು ತಿರಸ್ಕರಿಸಿತು.
ಇದನ್ನೂ ಓದಿ: Jagannath Tattoo: ವಿದೇಶಿ ಯುವತಿಯ ತೊಡೆಯಲ್ಲಿ ಜಗನ್ನಾಥನ ಟ್ಯಾಟೂ: ಪಾರ್ಲರ್ ಮಾಲೀಕ ಮತ್ತು ಕಲಾವಿದ ಬಂಧನ
ಸುಶೀಲ್ ಕುಮಾರ್ ಅವರು ದೇಶದ ಪ್ರಸಿದ್ಧ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಮತ್ತು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆದರೆ, ಕೊಲೆ ಆರೋಪದಲ್ಲಿ ಜೈಲು ಸೇರಿದ ನಂತರ ಅವರ ವೃತ್ತಿಜೀವನ ಹಾಳಾಯಿತು. ಅನೇಕ ಕುಸ್ತಿ ಟೂರ್ನಮೆಂಟ್ ಗಳಲ್ಲಿ ಚಾಂಪಿಯನ್ ಪಟ್ಟಗಳನ್ನು ಗೆದ್ದಿದ್ದ ಸುಶೀಲ್ ಕುಮಾರ್ ಅವರು ಆಗಾಗ್ಗೆ ತೋರಿದ ದುರ್ವರ್ತನೆಗಳಿಂದಲೂ ಸುದ್ದಿಯಾಗಿದ್ದರು.
2014ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಅವಕಾಶ ನೀಡದ್ದಕ್ಕೆ ಬೇಸರಗೊಂಡು, ಏಷ್ಯನ್ ಕ್ರೀಡಾಕೂಟದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದು ಭಾರತೀಯ ಕುಸ್ತಿ ಫೆಡರೇಷನ್ ಮೇಲೆ ಸೇಡು ತೀರಿಸಿಕೊಂಡ ಕಳಂಕವೂ ಅವರ ಮೇಲಿದೆ.