ಬೆಂಗಳೂರು: ಗೆಲ್ಲಲೇಬೇಕಾದ ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ಸೋತಿರುವ ಆರ್‌ಸಿಬಿ ಹಾಲಿ ಆವೃತ್ತಿಯ ಡಬ್ಲ್ಯುಪಿಎಲ್ನಿಂದ ಅಧಿಕೃತವಾಗಿ ಹೊರಕ್ಕೆ ಬಿದ್ದಿದೆ. ಯುಪಿ ವಾರಿಯರ್ಸ್ ದಾಖಲಿಸಿದ 226 ರನ್ಗಳ ಬೃಹತ್ ಮೊತ್ತವನ್ನು ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಕಳೆದ ಬಾರಿಯ ಚಾಂಪಿಯನ್ ತಂಡ ನಿರಾಸೆ ಎದುರಿಸಿತು.
ಆರ್ಸಿನಿಗೆ ಇನ್ನು ಒಂದು ಪಂದ್ಯ ಬಾಕಿ ಇದ್ದರೂ ಅದಕ್ಕಿಂತ ಮೊದಲೇ ಡಬ್ಲ್ಯುಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ರಿಚಾ ಘೋಷ್ (69) ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೋರಾಡಿದರೂ ಉಳಿದವರ ಪ್ರಯತ್ನ ಇಲ್ಲದ ಕಾರಣ ಆರ್‌ಸಿಬಿ ಮಂಕಾಯಿತು.
ಯುಪಿ ವಿರುದ್ಧ ಆರ್‌ಸಿಬಿ ಸೋಲುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಿದವು.
ಯುಪಿ ತಂಡ, ಶತಕ ವಂಚಿತರಾದ ಜಾರ್ಜಿಯಾ ವೋಲ್ (99) ಅವರ ಸ್ಫೋಟಕ ಆಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು. ಇದು ಡಬ್ಲ್ಯುಪಿಎಲ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ ಬೃಹತ್ ಮೊತ್ತ. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ 19.3 ಓವರ್ಗಳಲ್ಲಿ 213ಕ್ಕೆ ಆಲೌಟ್ ಆಯಿತು.