ರಾಯಚೂರು : ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಅಂಗವಾಗಿ ಪ್ರಹ್ಲಾದರಾಜರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಮಠದ ಮಧ್ವಧ್ವಾರದಲ್ಲಿ ರಥೋತ್ಸವಕ್ಕೆ ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಅದಕ್ಕೂ ಮುನ್ನಾ ಉತ್ತರಾರಾಧನೆ ಪ್ರಯುಕ್ತ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ರಾಯರ ಮೂಲ ಬೃಂದಾವನಕ್ಕೆ ಭಕ್ತರೊಬ್ಬರು ಸೇವಾರ್ಥವಾಗಿ ನೀಡಿದ ವಜ್ರಖಚಿತ ಕವಚ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ಪ್ರಹ್ಲಾದರಾಜ ಉತ್ಸವ ಮೂರ್ತಿಯನ್ನು ಸಂಸ್ಕೃತ ವಿದ್ಯಾಪಾಠ ಶಾಲೆವರೆಗೂ ವಿವಿಧ ವಾದ್ಯಮೇಳಗಳೊಂದಿಗೆ ಕರೆದೊಯ್ದು ಮರಳಿ ಮಠಕ್ಕೆ ಕರೆತರಲಾಯಿತು.
ಬಳಿಕ ಶ್ರೀಗಳು ಪ್ರಹ್ಲಾದರಾಜರಿಗೆ ಚಾಮರ ಸೇವೆ ನಡೆಸಿದರು. ನಂತರ ಶ್ರೀಗಳು ಎಲ್ಲರಿಗೂ ಗುಲಾಲ್ ಎರಚುವ ಮೂಲಕ ವಸಂತೋತ್ಸವ ಆಚರಿಸಿದರು. ತದನಂತರ ಪ್ರಹ್ಲಾದರಾಜ ಉತ್ಸವಮೂರ್ತಿಯನ್ನು ಶ್ರೀಮಠದ ಪ್ರಕಾರದಲ್ಲಿ ವಾದ್ಯಮೇಳಗಳೊಂದಿಗೆ ಮೆರವಣಿಗೆ ನಡೆಸಿ ರಥದಲ್ಲಿರಿಸಲಾಯಿತು. ಈ ವೇಳೆ ಶ್ರೀ ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿದರು. ರಥಬೀದಿಯಲ್ಲಿ ಲಕ್ಷಾಂತರ ಭಕ್ತ ಸಮೂಹದ ನಡುವೆ ಅದ್ದೂರಿಯಾಗಿ ರಥೋತ್ಸವ ನಡೆಸಲಾಯಿತು. ಈ ಬಾರಿಯೂ ಹೆಲಿಕಾಪ್ಟರ್ ಹಾಗೂ ಬೃಹತ್ ಡ್ರೋನ್ ಮೂಲಕ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು.