ಬೆಂಗಳೂರು: ರಾಜ್ಯಕ್ಕೆ ಝಿಕಾ ಆತಂಕ ಕಾಲಿಟ್ಟಿದ್ದು, ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಡೆಂಗ್ಯೂ (Dengue)ವಿನಿಂದ ಸಾಕಷ್ಟು ಅವಾಂತರ ಅನುಭವಿಸಿದ ನಂತರ ಈಗ ರಾಜ್ಯಕ್ಕೆ ಝಿಕಾ ಆತಂಕ ಶುರುವಾಗಿದೆ. ಬೆಂಗಳೂರಿನಲ್ಲಿ ಝಿಕಾ ವೈರಸ್ (Zika Virus) ಭೀತಿ ಹೆಚ್ಚಾಗಿದೆ. ಈಗಾಗಲೇ 7 ಜನರಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಸದ್ಯ ಝಿಕಾ ವೈರಸ್ ಭೀತಿ ಶುರುವಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ (Health Department) ಎಚ್ಚೆತ್ತುಕೊಂಡಿದ್ದು ಅಗತ್ಯ ಕ್ರಮ ವಹಿಸಲು ಮುಂದಾಗಿದೆ.
ಈಡಿಸ್ ಸೊಳ್ಳೆಯಿಂದ ಹರಡುವ ಝಿಕಾ ಪತ್ತೆಯಾಗಿದೆ. ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗುಳ್ಳೆ, ದದ್ದುಗಳು ಕಾಣಿಸಿಕೊಳ್ಳುವುದು ಝಿಕಾ ವೈರಸ್ ಗುಣ ಲಕ್ಷಣವಾಗಿದೆ. ಬಹುತೇಕ ಝೀಕಾ ಸೋಂಕಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಉಳಿದಂತೆ ರೋಗಲಕ್ಷಣಗಳ ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಈ ಗುಣಲಕ್ಷಣ ಕಂಡು ಬಂದರೆ ಕೂಡಲೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಝಿಕಾ ವೈರಸ್ ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.