ಲಕ್ನೋ: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸಾಕು ನಾಯಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡಲಾಗದೆ ಮನನೊಂದು ಇಬ್ಬರು ಸಹೋದರಿಯರು ಫಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಮೃತರನ್ನು ರಾಧಾ ಸಿಂಗ್ (24) ಮತ್ತು ಅವರ ಕಿರಿಯ ಸಹೋದರಿ ಜಿಯಾ ಸಿಂಗ್ (22) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪದವೀಧರರಾಗಿದ್ದರು. ಲಕ್ನೋದ ಪಾರಾ ಪ್ರದೇಶದ ದೋದಾ ಖೇಡಾ ಜಲಾಲ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಸಹೋದರಿಯರು ‘ಟೋನಿ’ ಹೆಸರಿನ ಜರ್ಮನ್ ಶೆಫರ್ಡ್ ನಾಯಿಯನ್ನು ಸಾಕಿದ್ದರು. ಕಳೆದ ಒಂದು ತಿಂಗಳಿನಿಂದ ಟೋನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು ಮತ್ತು ಆಹಾರ ಸೇವಿಸುವುದನ್ನು ನಿಲ್ಲಿಸಿತ್ತು. ನಾಯಿಯ ನರಳಾಟವನ್ನು ನೋಡಲಾಗದೆ ಸಹೋದರಿಯರು ಮಾನಸಿಕವಾಗಿ ಕುಗ್ಗಿಹೋಗಿದ್ದರು ಮತ್ತು ತಾವೂ ಕೂಡ ಊಟ ಬಿಟ್ಟಿದ್ದರು.
ಬುಧವಾರದಂದು ಹೊರಗಿನಿಂದ ಮನೆಗೆ ಬಂದ ಸಹೋದರಿಯರು ನೋವಿನಿಂದ ಒದ್ದಾಡಲಾರಂಭಿಸಿದ್ದಾರೆ. ತಾಯಿ ಗುಲಾಬಾ ದೇವಿ ವಿಚಾರಿಸಿದಾಗ, ತಾವು ಫಿನಾಯಿಲ್ ಕುಡಿದಿರುವುದಾಗಿ ತಿಳಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ರಾಧಾ ದಾರಿಮಧ್ಯೆ ಮೃತಪಟ್ಟರೆ, ಜಿಯಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಣ್ಣೀರು ತರಿಸುವ ‘ಕೊನೆಯ ಆಸೆ’:
ಸಾವಿನ ದವಡೆಯಲ್ಲಿದ್ದಾಗಲೂ ಈ ಸಹೋದರಿಯರು ತಮ್ಮ ತಾಯಿಯ ಬಳಿ ಬೇಡಿಕೊಂಡಿದ್ದು ಆ ಮೂಕ ಪ್ರಾಣಿಯ ಬಗ್ಗೆಯೇ ಎಂಬುದು ನೋವಿನ ಸಂಗತಿ. “ನಾವು ಸತ್ತ ನಂತರ ನಾಯಿಯನ್ನು ಮನೆಯಿಂದ ಹೊರಗೆ ಓಡಿಸಬೇಡಿ. ಅದನ್ನು ಮನೆಯಲ್ಲೇ ಇಟ್ಟುಕೊಳ್ಳಿ ಮತ್ತು ಅದಕ್ಕೆ ಸಮಯಕ್ಕೆ ಸರಿಯಾಗಿ ಔಷಧಿ ನೀಡಿ,” ಎಂಬುದು ಅವರ ಕೊನೆಯ ಆಸೆಯಾಗಿತ್ತು.
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಇಬ್ಬರು ಮಕ್ಕಳ ದಾರುಣ ಸಾವಿನಿಂದ ಬರಸಿಡಿಲು ಬಡಿದಂತಾಗಿದೆ. ತಂದೆ ಕೈಲಾಶ್ ಸಿಂಗ್ ಕಳೆದ ಆರು ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ. ಏಳು ವರ್ಷಗಳ ಹಿಂದೆ ಕಿರಿಯ ಮಗ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದ. ಈಗ ಇರುವ ಇಬ್ಬರು ಹೆಣ್ಣುಮಕ್ಕಳೂ ಪ್ರಾಣ ಕಳೆದುಕೊಂಡಿರುವುದು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕ್ರಿಸ್ಮಸ್ನಂದೇ ಐಸಿಸ್ಗೆ ಟ್ರಂಪ್ ಶಾಕ್ : ನೈಜೀರಿಯಾದಲ್ಲಿ ಉಗ್ರರ ಮೇಲೆ ವೈಮಾನಿಕ ದಾಳಿ



















