ಮುಂಬೈ: ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ(Mukesh Ambani) ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿ ಡೇಟಾ ಸೆಂಟರ್ ವೊಂದನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಇದು ಸಾಕಾರಗೊಂಡರೆ ಜಗತ್ತಿನಲ್ಲೇ ಅತಿದೊಡ್ಡ ಡೇಟಾ ಸೆಂಟರ್ ಇದಾಗಲಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆ(AI) ಕ್ಷೇತ್ರಕ್ಕೆ ಉತ್ತೇಜನ ನೀಡುವ ಗುರಿಯನ್ನು ರಿಲಯನ್ಸ್ ಕಂಪನಿ ಹಾಕಿಕೊಂಡಿದ್ದು, ಅದರನ್ವಯ ಗುಜರಾತ್‌ನ ಜಾಮ್‌ನಗರದಲ್ಲಿ ಈ ಬೃಹತ್ ದತ್ತಾಂಶ ಕೇಂದ್ರ ತಲೆಎತ್ತಲಿದೆ.
ಜಾಗತಿಕವಾಗಿ ಎಐ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಎನ್‌ವಿಡಿಯಾ(Nvidia) ಕಂಪನಿಯಿಂದ ಎಐ ಸೆಮಿಕಂಡಕ್ಟರ್‌ಗಳನ್ನು ಮುಕೇಶ್ ಅಂಬಾನಿಯವರು ಖರೀದಿಸಲಿದ್ದಾರೆ. ಕಳೆದ ವರ್ಷ ನಡೆದ ಎನ್‌ವಿಡಿಯಾ ಎಐ ಶೃಂಗ-2024ರಲ್ಲಿ ಎರಡೂ ಕಂಪನಿಗಳು ಭಾರತದಲ್ಲಿ ಎಐ ಮೂಲಸೌಕರ್ಯ ನಿರ್ಮಾಣದ ಕುರಿತು ಘೋಷಿಸಿದ್ದವು. ಅದರಂತೆ, ಗುಜರಾತ್‌ನಲ್ಲಿ ರಿಲಯನ್ಸ್ ಕಂಪನಿಯು ಒಂದು ಗಿಗಾವ್ಯಾಟ್ ಡೇಟಾ ಸೆಂಟರ್ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕೆ ಅಗತ್ಯವಾದ ಬ್ಲ್ಯಾಕ್‌ವೆಲ್ ಎಐ ಪ್ರೊಸೆಸರ್ ಗಳನ್ನು ಎನ್‌ವಿಡಿಯಾ ಪೂರೈಸಲಿದೆ.

ಭಾರತವು ತನ್ನ ಕೃತಕ ಬುದ್ಧಿಮತ್ತೆ(ಎಐ)ಯನ್ನು ತಾನೇ ಅಭಿವೃದ್ಧಿಪಡಿಸುವಂತಾಗಬೇಕು. ಬುದ್ಧಿಮತ್ತೆಯನ್ನು ಆಮದು ಮಾಡಿಕೊಳ್ಳಲು ದತ್ತಾಂಶವನ್ನು ರಫ್ತು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಾರದು. ಅದು ಬ್ರೆಡ್ ಅನ್ನು ಆಮದು ಮಾಡಿಕೊಳ್ಳಲು ಹಿಟ್ಟನ್ನು ರಫ್ತು ಮಾಡಿದಂತಾಗುತ್ತದೆ ಎಂದು ಆಗ ಎನ್‌ವಿಡಿಯಾ ಕಂಪನಿ ಸಿಇಒ ಜೆನ್‌ಸೆನ್ ಹುವಾಂಗ್ ಹೇಳಿದ್ದರು.
ಇದೇ ಸಂದರ್ಭದಲ್ಲಿ ಭಾರತದ ಬುದ್ಧಿಮತ್ತೆ ಸಾಮರ್ಥ್ಯದ ಕುರಿತು ಮಾತನಾಡಿದ ಮುಕೇಶ್ ಅಂಬಾನಿ, “ದೇಶದ ಸರ್ವರಿಗೂ ಸಮೃದ್ಧಿ ತರಲು ಮತ್ತು ಜಗತ್ತಿನಲ್ಲಿ ಸಮಾನತೆ ಸೃಷ್ಟಿಸಲು ನಾವು ಬುದ್ಧಿಮತ್ತೆಯನ್ನು ಬಳಸಿಕೊಳ್ಳಬೇಕು. ಅಮೆರಿಕ ಮತ್ತು ಚೀನಾ ಮಾತ್ರವಲ್ಲದೇ ಭಾರತ ಕೂಡ ಅತ್ಯುತ್ತಮವಾದ ಡಿಜಿಟಲ್ ಕನೆಕ್ಟಿವಿಟಿ ಮೂಲಸೌಕರ್ಯವನ್ನು ಹೊಂದಿದೆ” ಎಂದಿದ್ದಾರೆ.