ಮುಂಬೈ : ಇದೇ ಮೊದಲ ಬಾರಿಗೆ ಭಾರತದ ಆತಿಥ್ಯದಲ್ಲಿ ನವದೆಹಲಿಯಲ್ಲಿ ನಡೆದ 2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ, ಭಾರತೀಯ ಪ್ಯಾರಾ-ಅಥ್ಲೀಟ್‌ಗಳು ತೋರಿದ ಐತಿಹಾಸಿಕ ಪ್ರದರ್ಶನಕ್ಕೆ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ನೀತಾ ಎಂ. ಅಂಬಾನಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತವರು ನೆಲದಲ್ಲಿ ಭಾರತೀಯ ಕ್ರೀಡಾಪಟುಗಳ ಈ ಭರ್ಜರಿ ಪ್ರದರ್ಶನವು ದೇಶದ ಪ್ಯಾರಾ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಭಾರತದ ಪದಕ ಬೇಟೆ ಮತ್ತು ದಾಖಲೆಗಳು : ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರವರೆಗೆ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ, ಭಾರತೀಯ ಅಥ್ಲೀಟ್‌ಗಳು ತಮ್ಮ ಜೀವನದ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. ಭಾರತ ತಂಡವು ಒಟ್ಟು 6 ಚಿನ್ನ, 9 ಬೆಳ್ಳಿ, ಮತ್ತು 7 ಕಂಚಿನ ಪದಕಗಳು ಸೇರಿದಂತೆ ಒಟ್ಟು 22 ಪದಕಗಳನ್ನು ಗೆದ್ದು, ಪದಕಪಟ್ಟಿಯಲ್ಲಿ 10ನೇ ಸ್ಥಾನವನ್ನು ಅಲಂಕರಿಸಿತು. ಈ ಮೂಲಕ, ಜಪಾನ್‌ನ ಕೋಬೆಯಲ್ಲಿ ನಡೆದ 2024ರ ಆವೃತ್ತಿಯಲ್ಲಿ ಗೆದ್ದಿದ್ದ 17 ಪದಕಗಳ ತಮ್ಮ ಹಿಂದಿನ ಶ್ರೇಷ್ಠ ಸಾಧನೆಯನ್ನು ಭಾರತ ಮುರಿದಿದೆ.
ಈ ಚಾಂಪಿಯನ್‌ಶಿಪ್‌ನಲ್ಲಿ, ಬ್ರೆಜಿಲ್ 44 ಪದಕಗಳೊಂದಿಗೆ (15 ಚಿನ್ನ) ಅಗ್ರಸ್ಥಾನ ಪಡೆದರೆ, ಚೀನಾ 52 ಪದಕಗಳೊಂದಿಗೆ (13 ಚಿನ್ನ) ಎರಡನೇ ಸ್ಥಾನವನ್ನು ಗಳಿಸಿತು.
ಕ್ರೀಡಾಪಟುಗಳ ಮನೋಬಲಕ್ಕೆ ನೀತಾ ಅಂಬಾನಿ ಮೆಚ್ಚುಗೆ : ಈ ಸಾಧನೆಯ ಬಗ್ಗೆ ಮಾತನಾಡಿದ ನೀತಾ ಎಂ. ಅಂಬಾನಿ, “ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಮ್ಮ ಎಲ್ಲಾ ಪ್ಯಾರಾ ಅಥ್ಲೀಟ್‌ಗಳಿಗೆ ಅಭಿನಂದನೆಗಳು. ಭಾರತ ತಂಡದ ಈ ಅತ್ಯುತ್ತಮ ಸಾಧನೆಯು, ಪ್ಯಾರಾ ಕ್ರೀಡೆಯಲ್ಲಿ ನಮ್ಮ ಬೆಳೆಯುತ್ತಿರುವ ಶಕ್ತಿಗೆ ಸಾಕ್ಷಿಯಾಗಿದೆ.
ನಮ್ಮ ಆರು ಚಿನ್ನದ ಪದಕ ಗೆಲುವುಗಳು, ಈ ಹಿಂದಿನ ಜಂಟಿ ಅತ್ಯುತ್ತಮ ದಾಖಲೆಯನ್ನು ಸರಿಗಟ್ಟಿದ್ದು, ಇದು ನಮ್ಮ ನಿರಂತರ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಹೇಳಿದರು. “ಈ ಐತಿಹಾಸಿಕ ಕ್ರೀಡಾಕೂಟವನ್ನು ಮೊದಲ ಬಾರಿಗೆ ನಮ್ಮ ದೇಶದಲ್ಲಿ ಆಯೋಜಿಸಿದ್ದು ಮತ್ತು ನಮ್ಮ ಚಾಂಪಿಯನ್‌ಗಳು ತವರು ನೆಲದಲ್ಲಿ ಮಿಂಚುವುದನ್ನು ನೋಡಿರುವುದು ನಮಗೆಲ್ಲರಿಗೂ ಅಪಾರ ಹೆಮ್ಮೆಯನ್ನು ತಂದಿದೆ. ಅವರ ಧೈರ್ಯ ಮತ್ತು ಪರಿಶ್ರಮವು, ಶ್ರೇಷ್ಠ ವಿಜಯಗಳು ಕೇವಲ ಪದಕಗಳಲ್ಲ, ಅವು ಒಳಗೊಳ್ಳುವಿಕೆ, ಸ್ಥಿತಿಸ್ಥಾಪಕತ್ವ ಮತ್ತು ಮಾನವ ಮನೋಭಾವದ ಶ್ರೇಷ್ಠತೆಯ ಪ್ರತೀಕ ಎಂಬುದನ್ನು ನಮಗೆ ನೆನಪಿಸುತ್ತದೆ,” ಎಂದು ನೀತಾ ಅಂಬಾನಿ ಅವರು ಕ್ರೀಡಾಪಟುಗಳ ಮನೋಬಲವನ್ನು ಕೊಂಡಾಡಿದರು.
ಸಿಮ್ರಾನ್ ಶರ್ಮಾ (ಮಹಿಳೆಯರ 200 ಮೀ. ಓಟ) ಮತ್ತು ಪ್ರೀತಿ ಪಾಲ್ (ಮಹಿಳೆಯರ 100 ಮೀ. ಓಟ) ಅವರಂತಹ ಅಥ್ಲೀಟ್‌ಗಳು ಬೆಳ್ಳಿ ಪದಕ ಗೆದ್ದು ಗಮನ ಸೆಳೆದರೆ, ಪ್ಯಾರಾಲಿಂಪಿಕ್ಸ್ ಚಾಂಪಿಯನ್ ನವದೀಪ್ ಸಿಂಗ್ (ಜಾವೆಲಿನ್ ಥ್ರೋ) ಕೂಡ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಈ ಪ್ರದರ್ಶನವು ಮುಂಬರುವ ಪ್ಯಾರಾಲಿಂಪಿಕ್ಸ್‌ಗೆ ಭಾರತೀಯ ಅಥ್ಲೀಟ್‌ಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.