ನವದೆಹಲಿ: ತವರು ರಾಜ್ಯ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮಾರ್ಚ್ 3) ವಿಶ್ವ ವನ್ಯಜೀವಿ ದಿನಾಚರಣೆಯ ಅಂಗವಾಗಿ ಇಲ್ಲಿನ ಜುನಾಗಢ ಜಿಲ್ಲೆಯ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹ ಸಫಾರಿ ಮಾಡಿದ್ದಾರೆ.
ಭಾನುವಾರ ಸಂಜೆ ಸೋಮನಾಥದಿಂದ ಆಗಮಿಸಿದ ಮೋದಿ, ಸಾಸನ್ನಲ್ಲಿ ರಾಜ್ಯ ಅರಣ್ಯ ಇಲಾಖೆ ನಿರ್ವಹಿಸುವ ಅರಣ್ಯ ಅತಿಥಿ ಗೃಹವಾದ ಸಿಂಹ್ ಸದನದಲ್ಲಿ ರಾತ್ರಿ ಕಳೆದಿದ್ದಾರೆ. ಸೋಮವಾರ ಮುಂಜಾನೆಯೇ ಅವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೆಲವು ಸಚಿವರೊಂದಿಗೆ ಸಿಂಹ ಸಫಾರಿ ಮಾಡಿದ್ದಾರೆ. ಗಿರ್ ವನ್ಯಜೀವಿ ಅಭಯಾರಣ್ಯದ ಪ್ರಧಾನ ಕಚೇರಿಯಾದ ಸಾಸನ್ ಗಿರ್ನಲ್ಲಿ, ಪ್ರಧಾನಿ ಮೋದಿಯವರು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಏಳನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಮಂಡಳಿಯಲ್ಲಿ ಸೇನಾ ಮುಖ್ಯಸ್ಥರು, ವಿವಿಧ ರಾಜ್ಯಗಳ ಸದಸ್ಯರು, ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್ಜಿಒಗಳ ಪ್ರತಿನಿಧಿಗಳು, ಮುಖ್ಯ ವನ್ಯಜೀವಿ ವಾರ್ಡನ್ಗಳು ಮತ್ತು ವಿವಿಧ ರಾಜ್ಯಗಳ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 47 ಸದಸ್ಯರಿದ್ದಾರೆ. ಸಭೆಯ ಬಳಿಕ, ಪ್ರಧಾನಿ ಮೋದಿ ಸಾಸನ್ನಲ್ಲಿ ಕೆಲವು ಮಹಿಳಾ ಅರಣ್ಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.
ಪ್ರಾಜೆಕ್ಟ್ ಲಯನ್ ಯೋಜನೆಗೆ ಕೇಂದ್ರ ಸರ್ಕಾರ 2,900 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈ ಯೋಜನೆಯು ಏಷ್ಯಾಟಿಕ್ ಸಿಂಹಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಗುಜರಾತ್ ಅನ್ನು ಏಷ್ಯಾಟಿಕ್ ಸಿಂಹಗಳ ತವರು ಎಂದೇ ಕರೆಯಲಾಗುತ್ತದೆ. ಪ್ರಸ್ತುತ, ಗುಜರಾತ್ನ 9 ಜಿಲ್ಲೆಗಳ 53 ತಾಲ್ಲೂಕುಗಳಲ್ಲಿ ಸುಮಾರು 30,000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಏಷ್ಯಾಟಿಕ್ ಸಿಂಹಗಳು ವಾಸಿಸುತ್ತಿವೆ.
ಆಗಸ್ಟ್ 15, 2020ರಂದು ಪ್ರಾಜೆಕ್ಟ್ ಲಯನ್ ಬಗ್ಗೆ ಮೊದಲ ಬಾರಿಗೆ ಘೋಷಿಸಲಾಗಿತ್ತು. ಅಂದಿನ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ, ಸಮುದಾಯ ಪಾಲ್ಗೊಳ್ಳುವಿಕೆ, ತಂತ್ರಜ್ಞಾನ-ಚಾಲಿತ ಸಂರಕ್ಷಣೆ, ವನ್ಯಜೀವಿ ಆರೋಗ್ಯ ರಕ್ಷಣೆ, ಸರಿಯಾದ ಆವಾಸಸ್ಥಾನ ನಿರ್ವಹಣೆ ಮತ್ತು ಮಾನವ-ಸಿಂಹ ಸಂಘರ್ಷ ತಗ್ಗಿಸುವಿಕೆಯ ಮೂಲಕ ಏಷ್ಯಾಟಿಕ್ ಸಿಂಹಗಳ ಭವಿಷ್ಯವನ್ನು ಭದ್ರಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳಿದ್ದರು.