ವಾಷಿಂಗ್ಟನ್: ಜಾಗತಿಕ-ಭೌಗೋಳಿಕ ಸಂಘರ್ಷಗಳು ಮಿತಿಮೀರುತ್ತಿವೆ. ಉಕ್ರೇನ್-ರಷ್ಯಾ ಸಮರ, ಇಸ್ರೇಲ್-ಹಮಾಸ್, ಇಸ್ರೇಲ್-ಹೌಥಿ ಬಂಡುಕೋರರ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಅಮೆರಿಕ-ಚೀನಾ ಮಧ್ಯೆ ವ್ಯಾಪಾರ ಸಂಘರ್ಷಗಳು ಶುರುವಾಗಿವೆ. ಹಾಗಾಗಿ, ಮೂರನೇ ಮಹಾಯುದ್ಧ(World War III) ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, “ಮೂರನೇ ಮಹಾಯುದ್ಧ ನಡೆಯುವ ಸಮಯ ತುಂಬ ದೂರವಿಲ್ಲ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸ್ಫೋಟಕ ಹೇಳಿಕೆ ನೀಡಿದ್ದಾರೆ.
“ಜಗತ್ತು ಮೂರನೇ ಮಹಾಯುದ್ಧಕ್ಕೆ ಸಾಕ್ಷಿಯಾಗುವ ದಿನಗಳು ತುಂಬ ದೂರ ಇಲ್ಲ. ಮೂರನೇ ಮಹಾಯುದ್ಧದಿಂದ ಯಾರಿಗೂ ಲಾಭವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳು, ದೇಶಗಳ ಮನಸ್ಥಿತಿಯನ್ನು ನೋಡಿದರೆ ಮೂರನೇ ಮಹಾಯುದ್ಧ ನಡೆಯುವುದು ಖಚಿತ ಎಂಬಂತಾಗಿದೆ. ಆದರೆ, ಮಹಾಯುದ್ಧವನ್ನು ನಡೆಯಲು ಅಮೆರಿಕ ಸರ್ಕಾರವು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ” ಎಂದು ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಹೇಳಿದ್ದಾರೆ.
ಜಾಗತಿಕ ಭೌಗೋಳಿಕ ಸಂಘರ್ಷವನ್ನು ಇಟ್ಟುಕೊಂಡು, ಒಂದು ದೇಶದ ಮೇಲೆ ಮತ್ತೊಂದು ದೇಶವು ದಾಳಿ ಮಾಡುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಟ್ರಂಪ್ ಇಂತಹ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇಸ್ರೇಲ್, ಉಕ್ರೇನ್, ಪ್ಯಾಲೆಸ್ತೀನ್, ಇರಾನ್ ಸೇರಿ ಹಲವು ರಾಷ್ಟ್ರಗಳು ಸಂಘರ್ಷ ನಡೆಸುತ್ತಿರುವ ಕಾರಣ ಮೂರನೇ ಮಹಾಯುದ್ಧದ ಭೀತಿ ಎದುರಾಗಿದೆ.
ಯುದ್ಧ ನಡೆಯಲು ಬಿಡಲ್ಲ
“ಎಂದಿಗೂ ಮುಗಿಯದ ಸಂಘರ್ಷಗಳಿಂದ ಯಾರಿಗೂ ನೆಮ್ಮದಿಯಿಲ್ಲ. ಇದರಿಂದ ಜನ ಶಾಂತಿಯಿಂದ ಜೀವನ ಮಾಡಲು ಆಗುವುದಿಲ್ಲ. ಅಮೆರಿಕವು ಅಂತಹ ಯಾವುದೇ ಯುದ್ಧದಲ್ಲಿ ಭಾಗಿಯಾಗುವುದಿಲ್ಲ. ಹಾಗೆಯೇ, ಬೇರೆ ದೇಶಗಳು ಕೂಡ ಯುದ್ಧ ಮಾಡಲು ನಾವು ಬಿಡುವುದಿಲ್ಲ. ಹಾಗೊಂದು ವೇಳೆ ಮೂರನೇ ಮಹಾಯುದ್ಧ ನಡೆಯುವ ವಾತಾವರಣ ನಿರ್ಮಾಣವಾದರೆ, ನಾವು ಅದನ್ನು ತಡೆದೇ ತಡೆಯುತ್ತೇವೆ” ಎಂದು ಭರವಸೆ ನೀಡಿದ್ದಾರೆ.