ಈ ಬಾರಿ ವಿಶ್ವದ ನಂಬರ್ ಒನ್ ಆಟಗಾರನಿಗೆ ಯುಎಸ್ ಓಪನ್ ಒಲಿದು ಬಂದಿದೆ.
ವಿಶ್ವದ ನಂ. 1 ಟೆನಿಸ್ ಆಟಗಾರ ಜಾನಿಕ್ ಸಿನ್ನರ್ ಯುಎಸ್ ಓಪನ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಾನಿಕ್ ಸಿನ್ನರ್ ಅವರು ಅಮೆರಿಕದ ಟೇಲರ್ ಫ್ರಿಟ್ಝ್ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿ ಕಿರಿಟಕ್ಕೆ ಮುತ್ತಿಕ್ಕಿದ್ದಾರೆ.
ಈ ಗೆಲುವಿನ ಮೂಲಕ ಯುಎಸ್ ಓಪನ್ ಗೆದ್ದ ಮೊದಲ ಇಟಾಲಿಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಫೈನಲ್ ಪಂದ್ಯವನ್ನು ಜಾನಿಕ್ ಏಕಪಕ್ಷೀಯವಾಗಿ ಗೆದ್ದು ಬೀಗಿದ್ದು ವಿಶೇಷವಾಗಿತ್ತು. ಮೊದಲ ಸುತ್ತಿನಲ್ಲಿ ಅತ್ಯುತ್ತಮ ಸರ್ವ್ಗಳೊಂದಿಗೆ ಗಮನ ಸೆಳೆದ ಜಾನಿಕ್, ಆ ನಂತರ ಫೋರ್ ಹ್ಯಾಂಡ್ ಶಾಟ್ ಗಳ ಮೂಲಕ ಫ್ರಿಟ್ಝ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಪರಿಣಾಮ ಮೊದಲ ಸುತ್ತನ್ನು ಸಿನ್ನರ್ 6-3 ಅಂತರದಿಂದ ಸುಲಭದಲ್ಲಿ ಗೆದ್ದರು.
ಎರಡನೇ ಸುತ್ತಿನಲ್ಲೂ ತಮ್ಮ ಪರಾಕ್ರಮ ಮುಂದುವರೆಸಿದ ಜಾನಿಕ್ ಸಿನ್ನರ್ ಡ್ರಾಪ್ ಶಾಟ್ ಮತ್ತು ಓವರ್ ಹೆಡ್ ಹೊಡೆತಗಳ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, 6-4 ಅಂತರದಿಂದ ದ್ವಿತೀಯ ಸುತ್ತು ಗೆದ್ದರು. ಮೂರನೇ ಸುತ್ತಿನಲ್ಲಿ ಜಾನಿಕ್ ಗೆ ಅತ್ಯುತ್ತಮ ಸರ್ವ್ ಗಳ ಮೂಲಕ ಫ್ರಿಟ್ಝ್ ಪೈಪೋಟಿ ನೀಡಿದರು. ಕೊನೆಗೂ ಜಾನಿಕ್ 7-5 ಅಂತರದಿಂದ ಮೂರನೇ ಸುತ್ತನ್ನು ಗೆದ್ದುಕೊಂಡರು.
ಈ ಮೂಲಕ ನೇರ ಸೆಟ್ ಗಳಿಂದ ಫೈನಲ್ ಪಂದ್ಯ ಗೆದ್ದು ಜಾನಿಕ್ ಸಿನ್ನರ್ ಯುಎಸ್ ಓಪನ್ ಗೆದ್ದ ಇಟಲಿಯ ಮೊದಲ ಟೆನಿಸ್ ತಾರೆ ಎಂಬ ದಾಖಲೆ ಬರೆದರು.
ಇದಕ್ಕೂ ಮುನ್ನ 23 ರ್ಷದ ಜಾನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ ಗೆದ್ದಿದ್ದರು. ಈಗ ಯುಎಸ್ ಓಪನ್ ನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.