ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಜಂಬೂ ಸವಾರಿಯಲ್ಲಿ ಭಾಗವಹಿಸಲು ಗಜಪಡೆ ಸಿದ್ಧವಾಗಿದೆ. ಇಡೀ ಅರಮನೆ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ. ಅಲ್ಲದೇ, ಆನ್ ಲೈನ್ ಮೂಲಕ ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಎಲ್ಲರಿಗೂ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸೆಪ್ಟೆಂಬರ್ 26 ರಿಂದ 30 ರವರೆಗೂ 5 ದಿನಗಳ ಕಾಲ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ 1000 ದಿಂದ 1500 ಗೋಲ್ಡ್ ಕಾರ್ಡ್ ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಒಂದು ‘ದಸರಾ ಗೋಲ್ಡ್ ಕಾರ್ಡ್’ಗೆ 6500 ರೂ. ನಿಗದಿ ಪಡಿಸಲಾಗಿದೆ. ಒಂದು ದಸರಾ ಗೋಲ್ಡ್ ಕಾರ್ಡ್ ನಲ್ಲಿ ಒಬ್ಬರು ಜಂಬೂ ಸವಾರಿ ಮೆರವಣಿಗೆ, ಪಂಜಿನ ಕವಾಯತು, ಚಾಮುಂಡಿ ಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆ ಮಾಡಬಹುದು.
ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಟಿಕೆಟ್ ದರ 3500 ರೂ., ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್ ದರ 1000 ರೂ. ನಿಗದಿ ಮಾಡಲಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಹೇಳಿದ್ದಾರೆ.
ಈ ಬಾರಿ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದೆ. ನಗರದ ಸುತ್ತಮುತ್ತ 130 ಕಿಮೀವರೆಗೆ 10 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲಾಗುತ್ತಿದೆ. ಜಂಬೂಸವಾರಿಗೆ ವಿದ್ಯುತ್ ರಥ ಸ್ಥಬ್ಧಚಿತ್ರ ಮೆರವಣಿಗೆ, ಅಕ್ಟೊಬರ್ 6, 7, 11, 12ರಂದು ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಶೋ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.
ಮಾನಸಗಂಗೋತ್ರಿಯ ಬಯಲು ರಂಗಂಮದಿರದಲ್ಲಿ ಯುವ ಸಂಭ್ರಮ ನಡೆಯಲಿದೆ. ಸೆಪ್ಟೆಂಬರ್ 24 ರಂದು ಸ್ಯಾಂಡಲ್‌ವುಡ್ ಖ್ಯಾತ ನಟ ಶ್ರೀಮುರುಳಿ ಮತ್ತು ನಟಿ ರುಕ್ಮಿಣಿ ವಸಂತ್ ಯುವ ಸಂಭ್ರಮದ ಉದ್ಘಾಟನೆ ಮಾಡಲಿದ್ದಾರೆ.