ಬೆಂಗಳೂರು : ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ದಂಪತಿ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಕೆಜಿಗಟ್ಟಲೆ ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಾರತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ದಂಪತಿ ವಿರುದ್ಧ ದೂರು ದಾಖಲಾಗಿದೆ.

ಉದ್ಯಮಿ ಶಿವಕುಮಾರ್ ಎಂಬುವರ ಮನೆಯಲ್ಲಿ ಜನವರಿ 25ರಂದು ಹಾಡಹಗಲೇ ಘಟನೆ ನಡೆದಿದೆ. ನೇಪಾಳ ಮೂಲದ ದಿನೇಶ್ (32) ಹಾಗೂ ಕಮಲಾ (25) ಎಂಬ ದಂಪತಿ ಕೃತ್ಯವೆಸಗಿದ್ದಾರೆ ಎಂದು ದೂರು ನೀಡಲಾಗಿದೆ. ಶಿವಕುಮಾರ್ ಅವರ ಪುತ್ರ ಶೀಮಂತ್ ಎಸ್. ಅರ್ಜುನ್ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದಾರೆ.
20 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರ್ಪಡೆ: ಶಿವಕುಮಾರ್ ಅವರ ಮನೆಯ ಹೌಸ್ ಕೀಪಿಂಗ್ ಹಾಗೂ ಸಣ್ಣಪುಟ್ಟ ಕೆಲಸಗಳಿಗಾಗಿ ದಿನೇಶ್ ಹಾಗೂ ಕಮಲಾ ದಂಪತಿಯನ್ನು ಕೇವಲ 20 ದಿನಗಳ ಹಿಂದಷ್ಟೆ ಸೇರಿಸಿಕೊಳ್ಳಲಾಗಿತ್ತು. ಜನವರಿ 25ರಂದು ಸಂಬಂಧಿಕರೊಬ್ಬರ ಮನೆಯಲ್ಲಿ ಭೂಮಿ ಪೂಜೆ ಇದ್ದುದರಿಂದ ಶಿವಕುಮಾರ್ ಅವರ ಕುಟುಂಬ ಬೆಳಗ್ಗೆಯೇ ಹೆಚ್.ಕ್ರಾಸ್‌ಗೆ ತೆರಳಿತ್ತು. ಆ ಸಂದರ್ಭದಲ್ಲಿ ಮನೆಯ ನೆಲಮಹಡಿ, ಮೊದಲ ಮಹಡಿಯಲ್ಲಿದ್ದ ಬೆಡ್ ರೂಮ್ ಲಾಕರ್ ಮುರಿದು 11.5 ಕೆ.ಜಿ ಚಿನ್ನ ಹಾಗೂ ವಜ್ರಾಭರಣಗಳು, 5 ಕೆ.ಜಿ ಬೆಳ್ಳಿ, 11.5 ಲಕ್ಷ ರೂಪಾಯಿ ನಗದು ಹಣವನ್ನು ದಿನೇಶ್ ಹಾಗೂ ಕಮಲಾ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಾಹ್ನ 12:30ರ ಸುಮಾರಿಗೆ ಅಡುಗೆ ಕೆಲಸದಾಕೆ ಗಮನಿಸಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬಯಲಾಗಿದೆ.
“ಆರೋಪಿಗಳು ಇನ್ನಿಬ್ಬರ ಮೂಲಕ ಮನೆ ಕೆಲಸಕ್ಕೆ ಸೇರಿದ್ದರು ಎಂದು ದೂರು ನೀಡಲಾಗಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಹೊರ ರಾಜ್ಯಗಳಲ್ಲಿಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ” ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಅಮೆರಿಕ ಸಂಸದೆ ಇಲ್ಹಾನ್ ಒಮರ್ ಮೇಲೆ ನಿಗೂಢ ದ್ರವ ಸಿಂಪಡಿಸಿ ಹಲ್ಲೆ ಯತ್ನ!



















