ವಾಷಿಂಗ್ಟನ್: ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಬಂಧನದ ಬಳಿಕ ನಡೆದ ವಿಶೇಷ ಬೆಳವಣಿಗೆಯೊಂದರಲ್ಲಿ ಆ ದೇಶದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರು ತಮಗೆ ಲಭಿಸಿದ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಶ್ವೇತಭವನದಲ್ಲಿ ನಡೆದ ಭೇಟಿಯ ವೇಳೆ ಈ ಘಟನೆ ನಡೆದಿದ್ದು, ಇದನ್ನು ಟ್ರಂಪ್ “ಅದ್ಭುತ ನಡೆ” (Wonderful Gesture) ಎಂದು ಬಣ್ಣಿಸಿದ್ದಾರೆ.
ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಮಚಾಡೊ, ಇತ್ತೀಚೆಗೆ ಟ್ರಂಪ್ ಅವರ ಬೆಂಬಲವನ್ನು ಮರಳಿ ಪಡೆಯುವ ಪ್ರಯತ್ನವಾಗಿ ಈ ನಡೆ ಅನುಸರಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶ್ವೇತಭವನದಲ್ಲಿ ಮಚಾಡೊ ಅವರನ್ನು ಭೇಟಿಯಾದ ನಂತರ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಾನು ಮಾಡಿದ ಕೆಲಸಕ್ಕಾಗಿ ಆಕೆ ತನ್ನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನನಗೆ ನೀಡಿದ್ದಾರೆ. ಆಕೆ ಒಬ್ಬ ಅದ್ಭುತ ಮಹಿಳೆ, ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಪರಸ್ಪರ ಗೌರವದ ಸಂಕೇತವಾಗಿ ಅವರು ಪದಕ ನೀಡಿರುವುದು ಶ್ಲಾಘನೀಯ,” ಎಂದು ಟ್ರಂಪ್ ಬರೆದುಕೊಂಡಿದ್ದಾರೆ. ಅಧಿಕಾರಿಯೊಬ್ಬರ ಪ್ರಕಾರ, ಟ್ರಂಪ್ ಈ ಪದಕವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ನಿರ್ಧರಿಸಿದ್ದಾರೆ.
ನಿಯಮಗಳು ಏನನ್ನುತ್ತವೆ?
ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬೇರೆಯವರಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ನೊಬೆಲ್ ಇನ್ಸ್ಟಿಟ್ಯೂಟ್ ಸ್ಪಷ್ಟಪಡಿಸಿದೆ. ಆದರೂ, ಟ್ರಂಪ್ ಅವರಿಗೆ ನೊಬೆಲ್ ಪ್ರಶಸ್ತಿ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇರುವುದರಿಂದ, ಮಚಾಡೊ ಅವರ ಈ ನಡೆ ಸಾಂಕೇತಿಕವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಮಚಾಡೊ ಹೇಳಿದ್ದೇನು?
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಚಾಡೊ, “ನಮ್ಮ ಸ್ವಾತಂತ್ರ್ಯದ ಮೇಲಿನ ಅವರ ವಿಶಿಷ್ಟ ಬದ್ಧತೆಯನ್ನು ಗುರುತಿಸಿ ನಾನು ಅಮೆರಿಕ ಅಧ್ಯಕ್ಷರಿಗೆ ಈ ಪದಕವನ್ನು ನೀಡಿದ್ದೇನೆ,” ಎಂದು ಹೇಳಿದ್ದಾರೆ. ಶ್ವೇತಭವನದ ಹೊರಗೆ ಜಮಾಯಿಸಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾವು ಅಧ್ಯಕ್ಷ ಟ್ರಂಪ್ ಅವರನ್ನು ನಂಬಬಹುದು,” ಎಂದೂ ಹೇಳಿದ್ದಾರೆ.
2024ರ ಚುನಾವಣೆಯಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧ ಮಚಾಡೊ ಅವರ ಪಕ್ಷ ಗೆದ್ದಿದೆ ಎಂದು ವ್ಯಾಪಕವಾಗಿ ನಂಬಲಾಗಿತ್ತು. ಆದರೆ ಮಡುರೊ ಫಲಿತಾಂಶವನ್ನು ತಿರಸ್ಕರಿಸಿದ್ದರು. ನಂತರದ ದಿನಗಳಲ್ಲಿ ಸುಮಾರು 11 ತಿಂಗಳ ಕಾಲ ಮಚಾಡೊ ತಲೆಮರೆಸಿಕೊಂಡಿದ್ದರು. ಕಳೆದ ತಿಂಗಳು ನಾರ್ವೆಗೆ ತೆರಳಿದ್ದ ಅವರು, ಅಲ್ಲಿ ತಮ್ಮ ಮಗಳ ಮೂಲಕ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದರು.



















