ನವಿ ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಮಹಿಳಾ ಕ್ರಿಕೆಟ್ ನಲ್ಲೂ ಭಾರತವೇ ವಿಶ್ವ ಚಾಂಪಿಯನ್ ಎಂಬುದನ್ನು ಹರ್ಮನ್ ಪ್ರೀತ್ ಬಳಗವು ಸಾಧಿಸಿದೆ. ಕಳೆ ನಾಲ್ಕು ದಶಕಗಳ ನಿರಂತರ ಹೋರಾಟ, ಶ್ರಮ, ಅಲ್ಪ ಹಿನ್ನಡೆಯ ಬಳಿಕ ಮಹಿಳಾ ತಂಡವು ಮೊದಲ ಬಾರಿಗೆ ವಿಶ್ವಕಪ್ ಗೆಲುವು ಸಾಧಿಸುವ ಮೂಲಕ ಅಮೋಘವಾದುದನ್ನು ಸಾಧಿಸಿದೆ.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ವನಿತೆಯರ ತಂಡವು, ದಕ್ಷಿಣ ಆಫ್ರಿಕಾವನ್ನು 52 ರನ್ ಗಳಿಂದ ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾರತ ತಂಡವು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಗಳಿಸಿತು.

ಭಾರತ ನೀಡಿದ್ದ 299 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ನಲ್ಲಿ 246 ರನ್ ಗಳಿಗೆ ಎಲ್ಲ ವಿಕೆಟ್ ಕಳೆದು ಕೊಂಡು 52 ರನ್ ಗಳ ಅಂತರದಲ್ಲಿ ಭಾರತದ ಎದುರು ಸೋಲನುಭವಿಸಿತು. ಭಾರತದ ದೀಪ್ತಿ ಶರ್ಮಾಗೆ ಬ್ಯಾಟಿಂಗ್ ನಲ್ಲಿ ಅಷ್ಟೇ ಅಲ್ಲದೆ, ಬೌಲಿಂಗ್ ನಲ್ಲೂ ಮಿಂಚುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ದೀಪ್ತಿ ಶರ್ಮಾ 9.3 ಓವರ್ಗಳಿಗೆ ಕೇವಲ 39 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು.
ಲಾರಾ ವೊಲ್ವಾರ್ಡ್ಸ್ ಶತಕ ವ್ಯರ್ಥ
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಡ್ಸ್ ಅವರು ತಂಡಕ್ಕೆ ರನ್ ಗಳ ಕೊಡುಗೆ ನೀಡುತ್ತಲೇ ಇದ್ದರು. ಇದು ಭಾರತೀಯ ಬೌಲರ್ ಗಳಿಗೆ ಒಂದು ಹಂತದಲ್ಲಿ ತಲೆನೋವಾಗಿತ್ತು. ಇಂಗ್ಲೆಂಡ್ ವಿರುದ್ದ ಸೆಮಿಫೈನಲ್ನಲ್ಲಿ ಶತಕ ಸಿಡಿಸಿದ್ದ ಲಾರಾ ವೊಲ್ವಾರ್ಡ್ಟ್, ಭಾರತದ ಎದುರು ಫೈನಲ್ನಲ್ಲಿಯೂ ಶತಕ ಬಾರಿಸಿದರು. ಆದರೆ, ಇವರಿಗೆ ಸರಿಯಾದ ಸಾಥ್ ಸಿಗದ ಕಾರಣ ತಂಡವು ಸೋಲನುಭವಿಸಬೇಕಾಯತು. ಲಾರಾ ಆಡಿದ 98 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 101 ರನ್ ಕಲೆ ಹಾಕಿದರು
ಇದನ್ನೂ ಓದಿ : 60ನೇ ವಸಂತಕ್ಕೆ ಕಾಲಿಟ್ಟ ಶಾರುಖ್ | ಮಾಸ್ ಲುಕ್‌ನಲ್ಲಿ ‘ಕಿಂಗ್’ ಟೈಟಲ್ ರಿವೀಲ್



















