ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳೆಯರ ದಿನಾಚರಣೆ ಆಚರಿಸಲಾಗಿದೆ. ಈ ದಿನವನ್ನು “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ನಟಿಸಿರುವ ಮಹಿಳಾ ನಟಿಯರು ನಿರ್ದೇಶಕಿ ಸಿ.ಆರ್ ಬಾಬಿ ಅವರ ಸಾರಥ್ಯದಲ್ಲಿ ವಿಭಿನ್ನವಾಗಿ ಆಚರಿಸಿದ್ದಾರೆ. ಚಿತ್ರದ ನಾಯಕಿ ಅಂಕಿತ ಅಮರ್, ನಟಿಯರಾದ ಶೃತಿ ಕೃಷ್ಣ, ಮಾಳವಿಕ ಅವಿನಾಶ್, ಶೃತಿ ಹರಿಹರನ್, ವಾಣಿ ಹರಿಕೃಷ್ಣ ಹಾಗೂ ನಿರ್ದೇಶಕಿ ಬಾಬಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದ್ದಾರೆ.
ನಾನು ಬಹಳ ವರ್ಷಗಳ ನಂತರ ಮಹಿಳೆಯೊಬ್ಬರು ನಿರ್ದೇಶಿಸಿರುವ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಮಾತನಾಡಿದ ನಟಿ ಶೃತಿ ಕೃಷ್ಣ, ಈ ಚಿತ್ರದಲ್ಲಿ ನಾನು ಮೊದಲ ದಿವಸದ ಚಿತ್ರೀಕರಣದಲ್ಲಿ ಪಾಲ್ಗೊಂಡಾಗಲೇ ಬಾಬಿ ಅವರ ಕಾರ್ಯವೈಖರಿ ಕಂಡು ಬೆರಗಾದೆ. ಕೆಲಸದಲ್ಲಿ ಅವರಿಗಿರುವ ನಿಷ್ಠೆ ನಿಜಕ್ಕೂ ಅಭಿನಂದನಾರ್ಹ. ಈ ತಂಡದ ಜೊತೆಗೆ ಅಭಿನಯಿಸಿದ್ದು ಖುಷಿಯಾಗಿದೆ. ಅಜನೀಶ್ ಅವರ ನಿರ್ಮಾಣದ ಈ ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಚಿತ್ರರಂಗದ ತಂತ್ರಜ್ಞಾನ ವಿಭಾಗದಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸುವುದು ತುಂಬಾ ಕಡಿಮೆ. ಆ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸಂಗೀತ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಸಿ.ಆರ್.ಬಾಬಿ ಇದೇ ಮೊದಲ ಬಾರಿಗೆ “ಜಸ್ಟ್ ಮ್ಯಾರೀಡ್” ಚಿತ್ರದ ಮೂಲಕ ನಿರ್ದೇಶಕಿಯಾಗಿದ್ದಾರೆ. ಆದರೆ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಒಂದು ದಿನವೂ ಇದು ಬಾಬಿ ಅವರ ಮೊದಲ ನಿರ್ದೇಶನದ ಚಿತ್ರ ಅನಿಸಲೇ ಇಲ್ಲ. ಅಷ್ಟು ಅಚ್ಚುಕಟ್ಟಾಗಿತ್ತು ಅವರ ಕಾರ್ಯವೈಖರಿ. ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದು ಸಿ.ಆರ್.ಬಾಬಿ ಅವರಿಗಾಗಿ. ಅದರಲ್ಲೂ ಒಬ್ಬ ಮಹಿಳೆ ನಿರ್ದೇಶಿಸುತ್ತಿರುವ ಚಿತ್ರ ಎಂಬ ಕಾರಣಕ್ಕಾಗಿ. ಇನ್ನೂ ಈ ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ಅಜನೀಶ್ ಲೋಕನಾಥ್ ನಿರ್ಮಾಣ ಮಾಡಿದ್ದಾರೆ. “ಜಸ್ಟ್ ಮ್ಯಾರೀಡ್” ಚಿತ್ರ ಭರ್ಜರಿ ಹಿಟ್ ಆಗಲಿ ಎಂದು ನಟಿ ಮಾಳವಿಕ ಅವಿನಾಶ್ ಹಾರೈಸಿದರು.
abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸಿರುವ, ಸಿ.ಆರ್.ಬಾಬಿ ಅವರ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಜಸ್ಟ್ ಮ್ಯಾರೀಡ್” ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.