ಬೆಂಗಳೂರು : ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದೆ. ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (SIT) ನವೆಂಬರ್ ಅಂತ್ಯದೊಳಗೆ ಬೆಳ್ತಂಗಡಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆಯಿದೆ.
ಈ ಮಧ್ಯೆ ಇದೀಗ ರಾಜ್ಯ ಮಹಿಳಾ ಆಯೋಗವು ಮತ್ತೆ ಎಸ್‌ಐಟಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ‘ಅಸಲಿ ನಾಪತ್ತೆ’ ಪ್ರಕರಣಗಳನ್ನು ‘ಗ್ರಹಿಸಿ’ ತನಿಖೆಗೆ ಆಗ್ರಹಿಸಿದೆ.

ಹೌದು.. ಈ ಹಿಂದೆ ಧರ್ಮಸ್ಥಳದ ಬುರುಡೆ ಪ್ರಕರಣ ಹೊರ ಬರುತ್ತಿದ್ದಂತೆ ಮಹಿಳಾ ಆಯೋಗವು ನೇರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ಕೋರಿತ್ತು. ಅದರಂತೆ ರಾಜ್ಯ ಸರ್ಕಾರವು ಸಾಮೂಹಿಕ ಸಾವುಗಳು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆಗಾಗಿ ಪೊಲೀಸ್ ಮಹಾನಿರ್ದೇಶಕ (ಆಂತರಿಕ ಭದ್ರತಾ ವಿಭಾಗ) ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ SIT ರಚಿಸಿತ್ತು.

ಇದೀಗ ಮಹಿಳಾ ಆಯೋಗವು ಮಾಧ್ಯಮಗಳ ವರದಿಯ ಆಧಾರದ ಮೇಲೆ ಎಸ್‌ಐಟಿಗೆ ಪತ್ರ ಬರೆದಿದ್ದು, ಎಸ್‌ಐಟಿ ರಚನೆಯಾದಾಗಿನಿಂದ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ‘ಚಿನ್ನಯ್ಯ’ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಮಾನವ ಕಳೇಬರಹಗಳ ಉತ್ಖನನಕ್ಕೆ ಸೀಮಿತವಾಗಿ ಆತನ ಹೇಳಿಕೆಯ ಮಿತಿಯೊಳಗೆ ತನಿಖೆ ನಡೆದಿರುವುದು ಕಂಡುಬಂದಿದೆ ಎಂದು ತಿಳಿಸಿದೆ.

ಹೀಗಾಗಿ, ಉತ್ಖನನದ ಸಂದರ್ಭದಲ್ಲಿ ದೊರೆತ ಅಸ್ಥಿಪಂಜರಗಳ ಅವಶೇಷಗಳ ಬಗ್ಗೆ ಸಾವು ಸಂಭವಿಸಿದ ಕಾರಣದ ಬಗ್ಗೆ ಅವುಗಳಲ್ಲಿ ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಬಗ್ಗೆ, ಕಾಡಿನ ಪ್ರದೇಶದಲ್ಲಿ ಅಸ್ಥಿಪಂಜರ ದೊರೆಯಲು ಕಾರಣಗಳ ಬಗ್ಗೆ ಮಾಹಿತಿ ಪತ್ತೆ ಹಚ್ಚುವ ಜೊತೆಗೆ, ಎಸ್‌ಐಟಿ ರಚನೆಯ, ಆಯೋಗದ ಕೋರಿಕೆ ಮತ್ತು ನಂತರದ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಎಸ್‌ಐಟಿಯು ಕೂಡಲೇ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅವರ ಅತ್ಯಾಚಾರ, ಕೊಲೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳುವಂತೆ ಕೋರಿದೆ. ಅಲ್ಲದೇ ಈಗಾಗಲೇ ಕ್ರಮ ಕೈಗೊಂಡಿದ್ದರೆ ಆ ಮಾಹಿತಿಯನ್ನು ಮಹಿಳಾ ಆಯೋಗಕ್ಕೂ ನೀಡುವಂತೆ ಪತ್ರದಲ್ಲಿ ತಿಳಿಸಿದೆ.

ಇದನ್ನೂ ಓದಿ : ಆರನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ : ರಾಜ್ಯ ಹೆದ್ದಾರಿ ಬಂದ್



















