ಹಾಸನ : ಮದುವೆಗೆ ಬಂದಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಹಾಸನ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿ ಪ್ರಿಯಾಂಕ ನಿಗೂಢವಾಗಿ ನಾಪತ್ತೆಯಾಗಿರುವ ಮಹಿಳೆ.
ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಿಯಾಂಕ ಚಿಕ್ಕಮಗಳೂರಿಗೆ ಗುರುವಾರ ಬಂದಿದ್ದರು. ನಿಗೂಢವಾಗಿ ನಾಪತ್ತೆಯಾದ ಬೆನ್ನಲ್ಲೇ ಈ ವಿಚಾರವಾಗಿ ದೂರು ಕೊಟ್ಟರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ. ಇದೀಗ ಅರೆಹಳ್ಳಿ ಹಾಗೂ ಬೇಲೂರು ಠಾಣೆ ಪೊಲೀಸರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಹೊರಟಿರುವ ಜನರಿಗೆ ಪ್ರಿಯಾಂಕಾ ಆಧಾರ್ ಕಾರ್ಡ್ ಸಿಕ್ಕಿದೆ. ಅವರು ತಕ್ಷಣ ಆಧಾರ್ ಕಾರ್ಡನಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದರು. ಅದು ಅವರ ಪತಿಗೆ ಹೋಗಿದೆ. ನಿಮ್ಮ ಪತ್ನಿಯ ಆಧಾರ್ ಕಾರ್ಡ್ ನಮಗೆ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಕುಟುಂಬಸ್ಥರು ಸ್ಥಳಕ್ಕೆ ಬಂದಾಗ ಅಲ್ಲಿ ಅವರ ವಸ್ತುಗಳು ಸಿಕ್ಕಿವೆ. ಆದರೆ ಅವರು ಕಂಡುಬಂದಿಲ್ಲ.
ರಾಷ್ಟ್ರೀಯ ಹೆದ್ದಾರಿ 373ರ ಸಮೀಪ ಇರುವ ಕೆರೆಯ ಬಳಿ ಚಪ್ಪಲಿ, ಬಟ್ಟೆ, ವ್ಯಾನಿಟಿ ಬ್ಯಾಗ್ ಎಲ್ಲವೂ ಪತ್ತೆಯಾಗಿದೆ. ಹಾಗಾಗಿ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಿಯಾಂಕರನ್ನು ತೀವ್ರವಾಗಿ ಹುಡುಕಾಟ ನಡೆಸಲಾಗುತ್ತಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ ಸುಮಾರು 25 ರಿಂದ 30 ಲಕ್ಷ ರೂ. ಮೌಲ್ಯದ ಒಡವೆ ಆಕೆಯ ಮೈಮೇಲೆ ಮೇಲೆ ಇತ್ತು. ಹಾಗಾಗಿ ಅದಕ್ಕೋಸ್ಕರ ಆಕೆಯನ್ನು ಯಾರಾದರೂ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಂದು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸೂರ್ಯಕುಮಾರ್ ನಾಯಕತ್ವದ ವಿರುದ್ಧ ಗುಡುಗಿದ ಶ್ರೀಕಾಂತ್ | ವರುಣ್, ಬುಮ್ರಾ ಕಡೆಗಣಿಸಿದ್ದಕ್ಕೆ ಆಕ್ರೋಶ



















