ಬೆಂಗಳೂರು | ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಯೇ ತನ್ನದೇ ಕಚೇರಿಯ ಮಹಿಳಾ ಸಿಬ್ಬಂದಿಯ ಅಂಗಾಂಗ ಮುಟ್ಟಿ ಬಲವಂತವಾಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಗಂಭೀರ ಆರೋಪ ಕೇಳಿಬಂದಿದೆ. ಈ ಮೂಲಕ ಸರ್ಕಾರಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ರಕ್ಷಣೆ ಇಲ್ಲದಂತಾಗಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು.. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕಾರು ಚಾಲಕ ಆಗಿರುವ ರಂಗನಾಥ್ ಅವರ ಮಗಳು ಗಾಂಧೀನಗರದಲ್ಲಿರುವ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ (KSNC) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಈಕೆಯ ಮೇಲೆ ಅಲ್ಲಿನ ರಿಜಿಸ್ಟ್ರಾರ್ ಮಲ್ಲು ಎಂಬಾತ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.

ಸಂತ್ರಸ್ತೆ ಮಹಿಳೆಯ ಹೇಳಿಕೆಯಂತೆ, ಆರೋಪಿ ಮಲ್ಲು ಬಲವಂತವಾಗಿ ಅಂಗಾಂಗ ಮುಟ್ಟಿ ಎಳೆದಾಡಿದ್ದಾನೆ. ಕೆಲಸದ ನೆಪದಲ್ಲಿಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ವಿರೋಧ ವ್ಯಕ್ತಪಡಿಸಿದರೂ ಬಿಡದೆ ಅಧಿಕಾರದ ಮದದಲ್ಲಿ ಎಳೆದಾಡಿ ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಿದ್ದಾರೆ.
ಆರೋಪಿ ಮಲ್ಲು ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ ಸಾರ್ವಜನಿಕ ಸ್ಥಳದಲ್ಲೂ ಸಂತ್ರಸ್ತೆಯ ಮೈ ಮುಟ್ಟಿ ಬಲವಂತವಾಗಿ ಎಳೆದಾಡಿದ್ದಲ್ಲದೆ ಕಾರೊಳಗೆ ಹತ್ತಿಸಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಬಿಡದ ಆರೋಪಿ ಮಲ್ಲು, ಈ ವೇಳೆ ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು, ಮುತ್ತು ಕೊಡಲು ಯತ್ನಿಸಿ ವಿಕೃತಿ ಮೆರೆದಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಿಜಿಸ್ಟ್ರಾರ್ ಮಲ್ಲು ವಿಕೃತ ಕಾಮದಾಟಕ್ಕೆ ನಲುಗಿ ಹೋಗಿರುವ ಸಂತ್ರಸ್ತೆ, ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಹೇಳಿಕೆ ಆಧರಿಸಿ ತನಿಖೆ ಚುರುಕುಗೊಂಡಿದೆ.
ರಿಜಿಸ್ಟ್ರಾರ್ ಮಲ್ಲು ನಾಪತ್ತೆ
ಇನ್ನು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಿಜಿಸ್ಟ್ರಾರ್ ಮಲ್ಲು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಕಾಮುಕ ಅಧಿಕಾರಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಚಲಿಸುತ್ತಿದ್ದ ರೈಲಿನಿಂದ ಹೊರ ಜಿಗಿಯಲು ಯತ್ನ.. ಯುವಕನ ಪ್ರಾಣ ಉಳಿಸಿದ ಟಿಟಿ


















