ಇಂದೋರ್: ಮಧ್ಯಪ್ರದೇಶದ ಇಂದೋರ್ ಮೂಲದ ಮಹಿಳೆಯೊಬ್ಬರು, ಬಿಹಾರದಲ್ಲಿರುವ ತನ್ನ ಪತಿಯ ವಿರುದ್ಧ “ಲವ್ ಜಿಹಾದ್” ಆರೋಪ ಮಾಡಿದ್ದಾರೆ. ಮದುವೆಯ ನಂತರ ತನ್ನನ್ನು ಗೋಮಾಂಸ ಸೇವಿಸುವಂತೆ ಬಲವಂತಪಡಿಸಲಾಗುತ್ತಿದೆ ಮತ್ತು ಬಲವಂತವಾಗಿ ಮತಾಂತರಗೊಳ್ಳುವಂತೆ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಪತಿಯ ಹಿಂಸೆಯಿಂದ ಬೇಸತ್ತಿರುವ ಮಹಿಳೆ, ತವರಿಗೆ ಹಿಂದಿರುಗಲು ಪೊಲೀಸರ ಸಹಾಯ ಕೋರಿದ್ದಾರೆ. ಆದರೆ, ಪತಿಯು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಫೇಸ್‌ಬುಕ್‌ನಿಂದ ಆರಂಭವಾದ ಪ್ರೀತಿ:
ಆರತಿ ಕುಮಾರಿ ಎಂಬ ಇಂದೋರ್‌ನ ಮಹಿಳೆ, 5 ವರ್ಷಗಳ ಹಿಂದೆ ಬಿಹಾರದ ಬೇಗುಸರಾಯಿಯ ಮೊಹಮ್ಮದ್ ಶಾಬಾಜ್ ಎಂಬ ವ್ಯಕ್ತಿಯನ್ನು ಫೇಸ್‌ಬುಕ್ ಮೂಲಕ ಪರಿಚಯಿಸಿಕೊಂಡಿದ್ದರು. ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಪ್ರೀತಿಗೆ ತಿರುಗಿತ್ತು. ನಂತರ ಮದುವೆಯಾಗಲು ಇಬ್ಬರೂ ನಿರ್ಧರಿಸಿದರು. ಆರತಿ ನೇರವಾಗಿ ಬೇಗುಸರಾಯಿಗೆ ತೆರಳಿ ಶಾಬಾಜ್‌ನನ್ನು ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಸುಗಮವಾಗಿತ್ತು ಎಂದು ತೋರಿದರೂ, ಮದುವೆಯಾದ ನಂತರ ಶಾಬಾಜ್‌ನ ನಿಜ ಬಣ್ಣ ಬಯಲಾಗತೊಡಗಿತು ಎಂದು ಆರತಿ ಆರೋಪಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ಕಿರುಕುಳ:
“ಮದುವೆಯಾದ ನಂತರ ಶಾಬಾಜ್ ನನ್ನನ್ನು ಗೋಮಾಂಸ ತಿನ್ನಲು ಮತ್ತು ನನ್ನ ಧರ್ಮವನ್ನು ಬದಲಾಯಿಸಿಕೊಳ್ಳುವಂತೆ ಒತ್ತಡ ಹಾಕಲು ಪ್ರಾರಂಭಿಸಿದ” ಎಂದು ಆರತಿ ಕುಮಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೇ ಅಲ್ಲದೆ, “ಅವನು ನನ್ನ ಫೋನ್‌ನಿಂದ ಹಿಂದೂ ದೇವರುಗಳ ಚಿತ್ರಗಳನ್ನು ಅಳಿಸಿಹಾಕಿದ್ದು, ನಾನು ಅವನ ಮಾತು ಕೇಳದಿದ್ದಾಗ ದೈಹಿಕವಾಗಿ ಹಲ್ಲೆ ಮಾಡಲು ಆರಂಭಿಸಿದ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಫೇಸ್‌ಬುಕ್‌ನಲ್ಲಿ ತನ್ನನ್ನು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರಿ ಎಂದು ಶಾಬಾಜ್ ಪರಿಚಯಿಸಿಕೊಂಡಿದ್ದ. ಆದರೆ ವಾಸ್ತವದಲ್ಲಿ, ಅವನು ಕೇವಲ ಹಾರಗಳನ್ನು ತಯಾರಿಸುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಆರತಿ ಹೇಳಿದ್ದಾರೆ. ದಿನ ಕಳೆದಂತೆ, ಶಾಬಾಜ್ ತನ್ನನ್ನು ನಿರ್ಲಕ್ಷಿಸಲು ಮತ್ತು ಕೆಟ್ಟದಾಗಿ ನಡೆಸಿಕೊಳ್ಳಲು ಪ್ರಾರಂಭಿಸಿದ ಎಂದೂ ಆರತಿ ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ಪತಿ
ಮಾನಸಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತ ಆರತಿ, ಬೇಗುಸರಾಯ್ ಪೊಲೀಸರನ್ನು ಸಂಪರ್ಕಿಸಿ ತಮ್ಮ ತವರು ಪಟ್ಟಣ ಇಂದೋರ್‌ಗೆ ಮರಳಲು ಸಹಾಯ ಮಾಡುವಂತೆ ಕೋರಿದ್ದಾರೆ. ಅವರು ಪೊಲೀಸ್ ವರಿಷ್ಠಾಧಿಕಾರಿಯ ಬಳಿಯೂ ಹೋಗಿದ್ದು, ಅಲ್ಲಿಂದ ಅವರನ್ನು ಮಹಿಳಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಆದರೆ, ಅಚ್ಚರಿ ಎಂದರೆ, ಆರತಿ ಶಾಬಾಜ್ ವಿರುದ್ಧ ಅಧಿಕೃತವಾಗಿ ದೂರು ನೀಡಿಲ್ಲ, ಹೀಗಾಗಿ ಎಫ್‌ಐಆರ್ ದಾಖಲಾಗಿಲ್ಲ. ಬದಲಿಗೆ, ತಮ್ಮನ್ನು ಇಂದೋರ್‌ಗೆ ಕಳುಹಿಸುವಂತೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ, ಶಾಬಾಜ್ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಆರತಿ ನನ್ನನ್ನು ಮದುವೆ ಆಗುವುದಕ್ಕಿಂತಲೂ ಮುಂಚೆಯೇ ಬೇರೆ ಮದುವೆಯಾಗಿದ್ದು, ಆಕೆಗೆ ಮೂವರು ಮಕ್ಕಳಿದ್ದಾರೆ ಎಂದು ಆರೋಪಿಸಿದ್ದಾರೆ. “ಅವಳಿಗೆ ಶಸ್ತ್ರಚಿಕಿತ್ಸೆಯಾಗಿದೆ ಮತ್ತು ಇನ್ನು ಮುಂದೆ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ. ಅವಳು ಇತರ ಪುರುಷರೊಂದಿಗೂ ಸಂಬಂಧ ಹೊಂದಿದ್ದಾಳೆ ಮತ್ತು ಐದು ವರ್ಷಗಳಲ್ಲಿ ಮೂರು ಬಾರಿ ಮನೆಯಿಂದ ಓಡಿಹೋಗಿದ್ದಾಳೆ” ಎಂದು ಶಾಬಾಜ್ ಪ್ರತ್ಯಾರೋಪ ಮಾಡಿದ್ದಾರೆ.
“ಓದಲು ಸಹ ಬಾರದ ಯಾರನ್ನಾದರೂ ಕುರಾನ್ ಓದಲು ಅಥವಾ ಗೋಮಾಂಸ ತಿನ್ನಲು ನಾನು ಏಕೆ ಕೇಳಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ. ಜೊತೆಗೆ ಆರತಿಯಿಂದ ತಮಗೆ ಮುಕ್ತಿ ಕೊಡಿಸಿ ಎಂದು ಶಾಬಾಜ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಆಕೆಯ ಆರೋಪಗಳು ಆಧಾರರಹಿತ ಎಂದು ಹೇಳಿದ್ದಾರೆ.
ಸದರ್ ಡಿಎಸ್‌ಪಿ ಸುಬೋಧ್ ಕುಮಾರ್ ಅವರು, “ಆರತಿ ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ ತಮ್ಮ ಪತಿಯ ವಿರುದ್ಧ ದೂರು ದಾಖಲಿಸಿಲ್ಲ. ಅವರು ಇಂದೋರ್‌ಗೆ ಕಳುಹಿಸಿಕೊಡುವಂತೆ ಮಹಿಳಾ ಪೊಲೀಸ್ ಠಾಣೆಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಆದ್ದರಿಂದ, ಅವರನ್ನು ಮಹಿಳಾ ಆಶ್ರಯ ತಾಣಕ್ಕೆ ಕಳುಹಿಸಲಾಗಿದೆ ಮತ್ತು ಅವರನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.