ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಬಳಿ ನಡೆದ ಕಾಡಾನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ ಹಿನ್ನಲೆ ಬಾಳೆಹೊನ್ನೂರು ಉಪ ವಿಭಾಗ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿ ಈ ಹೋರಾಟ ಇನ್ನು ದೊಡ್ಡ ಮಟ್ಟಕ್ಕೆ ನಡೆಸಬೇಕು ಎಂದಿದ್ದಾರೆ.
ವರದಿಗಾರರಿಗೆ ಪ್ರತಿಕ್ರಿಯಿಸಿದ ನಿಖಿಲ್, ನಿರಂತರವಾಗಿ ಈ ಭಾಗದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಕೂಡಲೇ ಅರಣ್ಯ ಸಚಿವರು ಸ್ಥಳಕ್ಕೆ ಆಗಮಿಸಬೇಕು. ನಿರಂತರವಾಗಿ ಈ ಭಾಗದ ರೈತರು ಕಾಡಾನೆ ದಾಳಿಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅರಣ್ಯ ಸಚಿವರಿಗೆ ಬಯಲು ಸೀಮೆಗೂ, ಮಲೆನಾಡು ಭಾಗದ ಪ್ರದೇಶಕ್ಕೂ ವ್ಯತ್ಯಾಸ ಗೊತ್ತಿದೆಯೋ, ಗೊತ್ತಿಲ್ಲವೋ ಎಂದು ಪ್ರಶ್ನಿಸಿದ್ದಾರೆ.
ಒಂದು ಕಡೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸುತ್ತದೆ. ಆದರೆ ಯಾರು ಕೂಡ ಅವರ ಪರಿಹಾರವನ್ನು ನಂಬಿಕೊಂಡು ಜೀವನ ನಡೆಸುತ್ತಿಲ್ಲ ಎಂದಿದ್ದಾರೆ.
ಈ ಕೂಡಲೇ ಅರಣ್ಯ ಇಲಾಖೆಯ ಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಬೇಕು ಹಾಗೂ ಇಲ್ಲಿನ ಅರಣ್ಯ ಅಧಿಕಾರಿಗಳು ಮತ್ತು ಸರ್ವ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಘೋಷಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಅನಿತಾ(25) ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ.