ಚಾಮರಾಜನಗರ: ಚಲಿಸುತ್ತಿದ್ದ ಬೈಕಿನ ಚಕ್ರಕ್ಕೆ ಸೀರೆಯ ಸೆರಗು ಸಿಲುಕಿದ ಪರಿಣಾಮ ಮಹಿಳೆ ಸಾವಿಗೀಡಾದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅರೇಪುರ ಗೇಟ್ ಸಮೀಪ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಲ್ಲೂಪುರ ಗ್ರಾಮದ ನಿವಾಸಿ ಸಿದ್ದಮ್ಮ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮಹದೇವಶೆಟ್ಟಿ ತಮ್ಮ ಪತ್ನಿ ಸಿದ್ದಮ್ಮ ಹಾಗೂ ಮೊಮ್ಮಗುವಿನೊಂದಿಗೆ ಬೇಗೂರು ಸಮೀಪದ ತಗ್ಗಲೂರಿನಿಂದ ಸ್ವಗ್ರಾಮಕ್ಕೆ ಬೈಕಿನಲ್ಲಿ ತೆರಳುತ್ತಿದ್ದರು.
ಈ ವೇಳೆ ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಸಿದ್ದಮ್ಮ ಅವರ ಸೀರೆಯ ಸೆರಗು ಹಿಂಬದಿ ಚಕ್ರಕ್ಕೆ ಸಿಲುಕಿ ರಸ್ತೆಗೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ತರಕಾರಿ ಲಾರಿಯ ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಅಪಘಾತದ ಮಾಹಿತಿ ತಿಳಿದ ಕೂಡಲೇ ಬೇಗೂರು ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಮಹದೇವಶೆಟ್ಟಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಹೂ ಮಾರಾಟದ ವಿಚಾರಕ್ಕೆ ಜಡೆ ಜಗಳ.. ಮಲ್ಲಿಗೆ ಹೂವನ್ನು ಬಿಸಾಕಿ ಉದ್ಧಟತನ



















