ಬೆಂಗಳೂರು : ಬೆಂಗಳೂರಿನಲ್ಲಿ ಹಾಡಹಗಲೇ ಯುವತಿಯನ್ನು ಪಾಗಲ್ ಪ್ರೇಮಿಯೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮಲ್ಲೇಶ್ವರಂನ ಮಂತ್ರಿ ಮಾಲ್ ಹಿಂಬದಿಯ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ. ಯಾಮಿನಿ ಪ್ರಿಯಾ.ಜಿ (20) ಕೊಲೆಯಾದ ಯುವತಿ.

ಬನಶಂಕರಿಯ ನರಗುಂದ ಕಾಲೇಜಿನಲ್ಲಿ ಬಿಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿನಿ, ಬೆಳಗ್ಗೆ 7 ಗಂಟೆಗೆ ಕಾಲೇಜಿಗೆ ಹೋಗಿದ್ದಳು. ವಾಪಸ್ ಮನೆಗೆ ಬರ್ತಿದ್ದ ವೇಳೆ ಪಾಗಲ್ ಪ್ರೇಮಿ ಹಿಂದಿನಿಂದ ಬಂದು ಅಟ್ಯಾಕ್ ಮಾಡಿದ್ದಾನೆ. ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಈ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತ ಯುವತಿ ಶ್ರೀರಾಂಪುರ ಸ್ವತಂತ್ರ ಪಾಳ್ಯದ ನಿವಾಸಿಯಾಗಿದ್ದು, ಉತ್ತರ ವಿಭಾಗ ಡಿಸಿಪಿ ನ್ಯಾಮೇಗೌಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಯ ಕತ್ತು ಹಾಗೂ ಮುಖದ ಭಾಗಕ್ಕೆ ತೀವ್ರ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ತನಿಖೆ ನಡೀತಾ ಇದೆ, ಈಗಲೇ ಏನು ಹೇಳಲು ಸಾಧ್ಯವಿಲ್ಲ. ಘಟನೆ ಹೇಗಾಯ್ತು ಏನು ಅಂತ ತನಿಖೆ ಮಾಡ್ತಾ ಇದ್ದೀವಿ, ಕುಟುಂಬಸ್ಥರಿಂದಲೂ ಮಾಹಿತಿ ಪಡೆಯಲಾಗ್ತಾ ಇದೆ ಎಂದು ಮಾಹಿತಿ ನೀಡಿದ್ದಾರೆ.