ಬೆಂಗಳೂರು: ಮಹಿಳೆಯೊಬ್ಬಳು ಮಗಳ ಚಿಕಿತ್ಸೆಗಾಗಿ ಆನ್‌ಲೈನ್‌ನಲ್ಲಿ ಪರಿಚಯವಾದ ಗೆಳೆಯನಿಂದ ಹಣ ಸಹಾಯ ಪಡೆದಿದ್ದಳು. ಇದನ್ನೆ ಬಂಡವಾಳ ಮಾಡಿಕೊಂಡ ಆನ್‌ಲೈನ್ ಗೆಳೆಯ ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಮನನೊಂದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜಗೋಪಾಲ್ ನಗರದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ ಸಂತ್ರಸ್ತೆ ಮಗಳಿಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ಪಾರಿತೋಷ್ ಯಾದವ್‌ನಿಂದ ಮಗಳ ಚಿಕಿತ್ಸೆಗಾಗಿ 30 ಸಾವಿರ ರೂ. ಸಾಲ ಪಡೆದಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಪಾರಿತೋಷ್ ದೈಹಿಕವಾಗಿ ಸಹಕರಿಸುವಂತೆ ಕಿರುಕುಳ ಕೊಡುತ್ತಿದ್ದ ಎಂದು ಆರೋಪಿಸಲಾಗಿದೆ.
ಪ್ರತಿನಿತ್ಯ ಮೆಸೇಜ್ ಮಾಡಿ ದೈಹಿಕವಾಗಿ ಸಹಕರಿಸದಿದ್ದರೆ ಪೋರ್ನ್ ವೆಬ್‌ಸೈಟ್, ವೇಶ್ಯಾವಾಟಿಕೆ ಮಾಡುವವರಿಗೆ ನಿನ್ನ ನಂಬರ್ ಕೊಡುತ್ತೇನೆ ಎಂದು ಮಹಿಳೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ದಿನನಿತ್ಯ ಮೆಸೇಜ್ ಮಾಡುವುದರ ಜೊತೆಗೆ ಅಸಭ್ಯ ಫೋಟೋ, ವಿಡಿಯೋಗಳನ್ನು ಮಹಿಳೆಗೆ ಕಳಿಸಲು ಶುರು ಮಾಡಿದ್ದಾನೆ. ಈ ವಿಷಯ ಆಕೆಯ ಗಂಡನಿಗೂ ಗೊತ್ತಾಗಿ ಇಬ್ಬರ ಮಧ್ಯೆ ಮನಸ್ಥಾಪ ಉಂಟಾಗಿತ್ತು. ಇದರಿಂದ ತೀರಾ ಮನನೊಂದಿದ್ದ ಸಂತ್ರಸ್ತೆ ಗಂಡನನ್ನು ತೊರೆದು ಸ್ನೇಹಿತೆ ಮನೆಗೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸ್ನೇಹಿತೆ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಈ ಘಟನೆ ಬಳಿಕ ರಾಜಗೋಪಾಲ ನಗರ ಪೋಲೀಸ್ ಠಾಣೆಯಲ್ಲಿಆರೋಪಿ ಪಾರಿತೋಷ್ ಯಾದವ್ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಪೋಕ್ಸೋ ಕೇಸ್ | ಜೇನುಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ; ಆರೋಪಿ ಅರೆಸ್ಟ್



















