ದಾವಣಗೆರೆ : ಕಾಂಗ್ರೆಸ್ ಭಂಡತನಕ್ಕೆ ಡಿಕೆಶಿ ಬೆಂಬಲಿಗರ ಕ್ರಿಮಿನಲ್ ಕೇಸ್ ವಾಪಸ್‌ಗೆ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿರುವುದು ತಾಜಾ ಉದಾಹರಣೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೇಣುಕಾಚಾರ್ಯ, ರೈತರ, ಜನಪರ ಹೋರಾಟ ಇದ್ರೆ ಪ್ರಕರಣ ವಾಪಸ್ ಪಡೆಯಲಿ. ಗೂಂಡಾಗಿರಿ ಮಾಡಿದವರ, ಬೆಂಕಿ ಹಚ್ಚಿದವರ ಕೇಸ್‌ಗಳನ್ನು ವಾಪಸ್ ಪಡೆಯಬಾರದು. ನಿಮ್ಮ(ಡಿಕೆಶಿ) ಹಿಂಬಾಲಿಕರ ಕೇಸ್ ವಾಪಸ್ ಪಡೆಯುವುದು ನಿಮ್ಮ ಭಂಡತನಕ್ಕೆ ತಾಜಾ ಉದಾಹರಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರವನ್ನು ಬಳಸುವುದಕ್ಕೆ ನಿರ್ಧರಸಿದ ಸಚಿವ ಸಂಪುಟ ಸಭೆಯ ನಿರ್ಧಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 136 ಕ್ಷೇತ್ರಗಳಲ್ಲಿ ಗೆದ್ದಿರುವುದು ಮತ ಕಳ್ಳತನವೇ ? ಲೋಕಸಭೆ ಚುನಾವಣೆಯಲ್ಲಿ ಮಾತ್ರ ಏಕೆ ಹೇಳುತ್ತೀರಿ ಚುನಾವಣಾ ಆಯೋಗ ಸಂಸ್ಥೆ ಮೇಲೆ ಅನುಮಾನ, ಆರೋಪ ಮಾಡಬಾರದು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಮತ ಎಣಿಕೆ ಮಾಡುವುದು ಕಿರಿಕಿರಿ. ರಾಜ್ಯ ಸರ್ಕಾರಕ್ಕೆ ಚುನಾವಣೆ ಮಾಡಲು ತಾಕತ್ತೂ ಇಲ್ಲ, ಧೈರ್ಯವೂ ಇಲ್ಲ. ಚುನಾವಣೆ ಮುಂದೂಡುವ ನೆಪ ಇದು ಎಂದು ಕಿಡಿ ಕಾರಿದ್ದಾರೆ.
ಇವಿಎಂ ಸಿಸ್ಟಮ್‌ನಲ್ಲಿ ಏನು ತಪ್ಪಿದೆ? ಎಂದು ಪ್ರಶ್ನಿಸಿದ್ದಲ್ಲದೇ, ಕಾಂಗ್ರೆಸ್ ಸರ್ಕಾರದ ಮೇಲೆ ಸಾಕಷ್ಟು ಆರೋಪಗಳು ಇವೆ. ಅಭಿವೃದ್ಧಿ ಇಲ್ಲ, ಕೊಟ್ಟ ಭರವಸ ಈಡೇರಿಸಕ್ಕಾಗುತ್ತಿಲ್ಲ ಎಂದು ಅವರು ಸಿಟ್ಟಾಗಿದ್ದಾರೆ.