ಬೆಳಗಾವಿ: ಇಂದಿನಿಂದ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳುತ್ತಿದೆ. ಅಕ್ಷರಶಃ ಆಡಳಿತ ವಿಪಕ್ಷಗಳ ನಡುವೆ ಸದನ ಕದನಕ್ಕೆ ಇದು ವೇದಿಕೆಯಾಗಲಿದೆ.
ಸರ್ಕಾರದ ಕಿವಿ ಹಿಂಡಲು ಈಗಾಗಲೇ ಹಲವು ಅಸ್ತ್ರಗಳನ್ನು ವಿರೋಧ ಪಕ್ಷಗಳು ತನ್ನ ಬತ್ತಳಿಕೆಯಲ್ಲಿ ಇಟ್ಟುಕಿಂವೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಪ್ರತಿಷ್ಠೆಯ ಗುದ್ದಾಟದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಯಾಗುವುದೇ ಎಂಬ ಪ್ರಶ್ನೆ ಈಗ ಆ ಭಾಗದ ಜನರನ್ನು ಕಾಡುತ್ತಿದೆ.
ಬಿಜೆಪಿ ವಕ್ಫ್, ಅಬಕಾರಿ ವಸೂಲಿ, ಬಾಣಂತಿಯರ ಸಾವು, ನಿಗಮ ಮಂಡಳಿಗಳ ವಿಷಯವನ್ನೇ ಮುಂದಿಟ್ಟುಕೊಂಡು ಸರ್ಕಾರ ಹಣಿಯಲು ಮುಂದಾಗಲು ನಿರ್ಧರಿಸಿದೆ. ಹೀಗಾಗಿ ನಿಲುವಳಿ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿ ಗದ್ದಲ ಉಂಟು ಮಾಡುವ ಸಾಧ್ಯತೆ ಇದೆ. ವಕ್ಫ್ ಚರ್ಚೆಗೆ ಬಂದರೆ ಎರಡು ದಿನಗಳ ಕಾಲ ಇದೇ ಮುಂದುವರಿಯಲಿದೆ. ನಂತರದಲ್ಲಿ ಸಿಎಂ ಉತ್ತರವೂ ಮಹತ್ವ ಪಡೆದುಕೊಳ್ಳಲಿದೆ. ಬಳ್ಳಾರಿಯಲ್ಲಿ 5 ಬಾಣಂತಿಯರು ಮೃತಪಟ್ಟಿದ್ದಾರೆ. ಇದು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಹೀಗಾಗಿ ಸದನದಲ್ಲಿ ಚರ್ಚೆಯ ಸಂದರ್ಭದಲ್ಲಿ ಈ ವಿಚಾರಕ್ಕೂ ವಿರೋಧ ಪಕ್ಷಗಳು ಹೆಚ್ಚಿನ ಆದ್ಯತೆ ನೀಡಬಹುದು.
ಅಬಕಾರಿ ಇಲಾಖೆಯ ವಿರುದ್ಧ ಭ್ರಷ್ಟಾಚಾರ ಆರೋಪ ಸೇರಿದಂತೆ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಪ್ರಸ್ತಾಪಿಸಲು ಎರಡೂ ಪಕ್ಷಗಳು ಮುಂದಾಗಿವೆ. ಶಾಸಕರಿಗೆ ಅನುದಾನ ಬಿಡುಗಡೆ ಆಗದೆ ವಿಷಯ ಕೂಡ ಚರ್ಚೆ ನಡೆಯಲಿದೆ. ಆದರೆ, ಬೆಳಗಾವಿ ಅಧಿವೇಶನದ ಮೂಲ ಉದ್ದೇಶ ಇಲ್ಲಿ ಸಾಕಾರಗೊಳ್ಳಲಿದೆಯೇ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಉತ್ತರ ಕರ್ನಾಟಕದಲ್ಲಿ ರೈತರು ಹಾಗೂ ಜನಸಾಮಾನ್ಯರು ಎದುರಿಸುವ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ಈ ಮೂಲಕ ಬೆಳಗಾವಿ ಅಧಿವೇಶನ ಅರ್ಥಪೂರ್ಣ ಆಗಬೇಕು ಎಂಬುವುದು ಈ ಭಾಗದ ಶಾಸಕರ ಬೇಡಿಕೆಯಾಗಿದೆ. ಇದಕ್ಕೆ ಉತ್ತರ ಯಾವ ರೀತಿ ಸಿಗಲಿದೆ ಎಂಬುವುದನ್ನು ಮಾತ್ರ ಕಾಯ್ದು ನೋಡಬೇಕಿದೆ.