ಗುರುಗ್ರಾಮ: ಇಲ್ಲಿನ ಡಿಎಲ್‌ಎಫ್ ಫೇಸ್ 3 ಪ್ರದೇಶದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಪತಿಯೊಂದಿಗೆ ತಮಾಷೆ ಮಾಡುತ್ತಿದ್ದ 22 ವರ್ಷದ ಮಹಿಳೆಯೊಬ್ಬರು ನಾಲ್ಕನೇ ಮಹಡಿಯ ಟೆರೇಸ್‌ನಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. “ನಾನೇನಾದರೂ ಕಾಲು ಜಾರಿ ಕೆಳಗೆ ಬಿದ್ದರೆ ನನ್ನನ್ನು ಹಿಡಿದುಕೊಳ್ಳುವೆಯಾ?” ಎಂದು ಪತ್ನಿಯು ತಮಾಷೆಯಾಗಿ ಕೇಳಿದ ಕೆಲವೇ ಕ್ಷಣಗಳಲ್ಲಿ ಈ ದುರಂತ ಸಂಭವಿಸಿದೆ.
ಒಡಿಶಾದ ಗಂಜಾಂ ಜಿಲ್ಲೆ ಮೂಲದವರಾದ ಬೋರಿಂಗಿ ಪಾರ್ವತಿ (22) ಮತ್ತು ಡಿ. ದುರ್ಯೋಧನ ರಾವ್ ಅವರು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಪಾರ್ವತಿ ಅವರು ಸಂಜೆ ತಮ್ಮ ಮನೆಯ ಟೆರೇಸ್‌ನ ತಡೆಗೋಡೆಯ ಮೇಲೆ ಕುಳಿತು ಪತಿಯೊಂದಿಗೆ ಹರಟುತ್ತಿದ್ದರು. ಈ ವೇಳೆ, “ನಾನೇನಾದರೂ ಜಾರಿ ಬಿದ್ದುಬಿಟ್ಟರೆ ನನ್ನನ್ನು ನೀನು ಹಿಡಿಯುತ್ತೀಯಾ?” ಎಂದು ತಮಾಷೆಯಾಗಿ ಕೇಳಿದ್ದಾರೆ.
ಇದನ್ನು ಕೇಳಿದ ಕ್ಷಣಾರ್ಧದಲ್ಲೇ ಅವರು ಒಂದು ಬದಿಗೆ ವಾಲಿದ್ದು, ಅವರನ್ನು ಹಿಂದಕ್ಕೆ ಎಳೆಯಲು ಪತಿ ರಾವ್ ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
“ಕೈ ಹಿಡಿದಿದ್ದೆ, ಆದರೆ ಜಾರಿಹೋದಳು”: ಪತಿ ಕಣ್ಣೀರು
“ಸುಮಾರು 2 ನಿಮಿಷಗಳ ಕಾಲ ಆಕೆಯ ಕೈಗಳನ್ನು ಹಿಡಿದುಕೊಂಡು ಸಹಾಯಕ್ಕಾಗಿ ಕಿರುಚಿದೆ. ಆದರೆ ಹತ್ತಿರದಲ್ಲಿ ಯಾರೂ ಇರಲಿಲ್ಲ, ಕೊನೆಗೆ ಅವಳು ಕೈಜಾರಿ ಹೋದಳು,” ಎಂದು ಪತಿ ದುರ್ಯೋಧನ ರಾವ್ ಕಣ್ಣೀರಿಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪಾರ್ವತಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅರ್ಧ ಗಂಟೆಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಇದೊಂದು ಆಕಸ್ಮಿಕ ದುರಂತ: ಪೊಲೀಸರು
ಪ್ರಕರಣದಲ್ಲಿ ಯಾವುದೇ ಸಂಚಿನ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. “ಈ ಘಟನೆಯಲ್ಲಿ ಯಾವುದೇ ಸಂಚು ಕಾಣಿಸುತ್ತಿಲ್ಲ. ಪತ್ನಿಯನ್ನು ಮೇಲೆತ್ತಲು ಯತ್ನಿಸಿದಾಗ ಗೋಡೆಗೆ ತಾಗಿ ಪತಿಯ ಮುಂದೋಳು ಮತ್ತು ಎದೆಯ ಭಾಗದಲ್ಲಿ ಗಾಯಗಳಾಗಿವೆ. ಪಾರ್ವತಿಯ ಕುಟುಂಬವೂ ಯಾವುದೇ ದೂರು ನೀಡಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ,” ಎಂದು ಡಿಎಲ್‌ಎಫ್ ಫೇಸ್ 3 ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯೋಗೇಶ್ ಕುಮಾರ್ ತಿಳಿಸಿದ್ದಾರೆ.
“ನನ್ನ ದುರದೃಷ್ಟ. ನಾವು ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದೆವು. ಮಗುವನ್ನು ಪಡೆಯುವ ಯೋಚನೆಯಲ್ಲಿದ್ದೆವು. ಆದರೆ ಒಂದೇ ಕ್ಷಣದಲ್ಲಿ ನಮ್ಮೆಲ್ಲಾ ಕನಸುಗಳು ನುಚ್ಚುನೂರಾದವು. ಬಹುಶಃ ದೇವರ ಇಚ್ಛೆ ಇದೇ ಆಗಿತ್ತು ಅನಿಸುತ್ತದೆ” ಎಂದು ದುಃಖತಪ್ತ ಪತಿ ಹೇಳಿದ್ದಾರೆ.



















