ವಾಷಿಂಗ್ಟನ್: ಕ್ಷಣಮಾತ್ರದಲ್ಲಿ ಇಡೀ ನಗರವನ್ನೇ ನಿರ್ನಾಮ ಮಾಡಬಲ್ಲಂಥ ಶಕ್ತಿಯುಳ್ಳ ‘ಸಿಟಿ ಕಿಲ್ಲರ್’ ಕ್ಷುದ್ರಗ್ರಹವೊಂದು ಭೂಮಿಯತ್ತ ಆಗಮಿಸುತ್ತಿದೆ ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಆತಂಕಕಾರಿ ಸಂಗತಿಯೆಂದರೆ, ಅದು ಭಾರತದ ಮುಂಬೈ ಅಥವಾ ಕೋಲ್ಕತ್ತಾಗೆ ಅಪ್ಪಳಿಸುವ ಸಾಧ್ಯತೆಯೂ ಇದೆಯಂತೆ!
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇತ್ತೀಚೆಗೆ ಪತ್ತೆಯಾದ 2024 ವೈಆರ್ 4 ಎಂಬ ಕ್ಷುದ್ರಗ್ರಹದ ಪಥದ ಮೇಲೆ ನಿಗಾ ಇರಿಸಿದ್ದು, ಇದೀಗ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳನ್ನು ಶೇಕಡಾ 3.1 ಕ್ಕೆ ಹೆಚ್ಚಿಸಿದೆ.
ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆ ತೀರಾ ಕಡಿಮೆಯಿದೆ. ಆದರೂ, ಒಂದು ವೇಳೆ ಅದು ಅಪ್ಪಳಿಸಿದ್ದೇ ಆದಲ್ಲಿ ಪೂರ್ವ ಪೆಸಿಫಿಕ್ ಮಹಾಸಾಗರ, ಉತ್ತರ ದಕ್ಷಿಣ ಅಮೆರಿಕಾ, ಅಟ್ಲಾಂಟಿಕ್ ಮಹಾಸಾಗರ, ಆಫ್ರಿಕಾ, ಅರೇಬಿಯನ್ ಸಮುದ್ರ ಮತ್ತು ದಕ್ಷಿಣ ಏಷ್ಯಾಗೆ ಅಪ್ಪಳಿಸಬಹುದು ಎಂದು ನಾಸಾ ದತ್ತಾಂಶ ಹೇಳಿದೆ. ಅಂದರೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಏಳು ನಗರಗಳಾದ ಮುಂಬೈ, ಕೋಲ್ಕತಾ, ಢಾಕಾ, ಬೊಗೊಟಾ, ಅಬಿದ್ಜಾನ್, ಲಾಗೋಸ್ ಮತ್ತು ಖಾರ್ತೋಮ್‌ಗೆ ಇದರ ಅಪಾಯ ಹೆಚ್ಚಿದೆ ಎನ್ನಲಾಗಿದೆ. ಈ ನಗರ ಪ್ರದೇಶಗಳು 11 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ.

ಪ್ರಸ್ತುತ ಭೂಮಿಯಲ್ಲಿರುವ ದೂರದರ್ಶಕಗಳ ಮುಖಾಂತರ ಈ ‘ಸಿಟಿ-ಕಿಲ್ಲರ್’ ಕ್ಷುದ್ರಗ್ರಹದ ಚಲನವಲನಗಳನ್ನು ಗಮನಿಸಲಾಗುತ್ತಿದೆ. ಆದರೆ, ಏಪ್ರಿಲ್ ತಿಂಗಳವರೆಗೆ ಇದು ಗೋಚರಿಸುತ್ತದೆಯಾದರೂ, ನಂತರದಲ್ಲಿ ಜೂನ್ 2028ರವರೆಗೆ ಇದರ ವೀಕ್ಷಣೆ ಕಷ್ಟ ಎಂದು ನಾಸಾ ಹೇಳಿದೆ.
ಈ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು ಈ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆ 2.3% ರಷ್ಟಿದೆ ಎಂದು ಊಹಿಸಿತ್ತು. ಆದರೆ, ಈಗ ಈ ಸಾಧ್ಯತೆಯನ್ನು ಶೇ.3.1ಕ್ಕೆ ಹೆಚ್ಚಿಸಿರುವುದು ಆತಂಕಕ್ಕೆ ಕಾರಣವಾಗಿದೆ.
“ಇನ್ನೂ ಅತ್ಯಂತ ಕಡಿಮೆ ಸಾಧ್ಯತೆಯಿದ್ದರೂ, ಕ್ಷುದ್ರಗ್ರಹ 2024 ವೈಆರ್ 4 ನ ಹೆಚ್ಚುವರಿ ಅವಲೋಕನಗಳು ಮತ್ತು ವಿಶ್ಲೇಷಣೆಯು ಡಿಸೆಂಬರ್ 22, 2032 ರಂದು ಭೂಮಿಯೊಂದಿಗಿನ ಅದರ ಪರಿಣಾಮ ಸಂಭವನೀಯತೆಯು 2.3% ಕ್ಕೆ ಏರಿದೆ ಎಂದು ಸೂಚಿಸುತ್ತದೆ” ಎಂದು ನಾಸಾ ತನ್ನ ವರದಿಯಲ್ಲಿ ತಿಳಿಸಿದೆ.
ಈ ಕ್ಷುದ್ರಗ್ರಹದ ಗಾತ್ರವನ್ನು ಅದರ ಪ್ರಕಾಶಮಾನತೆಯ ಆಧಾರದಲ್ಲಿ 130ರಿಂದ 300 ಅಡಿ ಅಗಲ ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇದು ಅಪರೂಪದ ಲೋಹ-ಸಮೃದ್ಧ ಕ್ಷುದ್ರಗ್ರಹದಂತಿಲ್ಲ, ಇದು ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ ಎಂದೂ ಹೇಳಲಾಗಿದೆ.
ಭೂಮಿಗೆ ಅಪ್ಪಳಿಸದೇ ಇದ್ದರೆ ಈ ಕ್ಷುದ್ರಗ್ರಹವು ಸುಮಾರು 8 ಮೆಗಾ ಟನ್ ಟಿಎನ್‌ಟಿ ಬಲದೊಂದಿಗೆ ಸಂಚಾರದ ಮಧ್ಯೆಯೇ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಊಹಿಸಿದ್ದಾರೆ. ಅಂದರೆ ಇದು- ಹಿರೋಷಿಮಾಗೆ ಹಾಕಿದ್ದ ಅಣು ಬಾಂಬ್‌ನ ಶಕ್ತಿಗಿಂತ 500 ಪಟ್ಟು ಹೆಚ್ಚು. ಇದು ಇತ್ತೀಚಿನ ಇತಿಹಾಸದಲ್ಲೇ ಎಂದೂ ಕಂಡಿರದಂತಹ ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹವಾಗಿದೆ.
ಸುಮಾರು 6.60 ಕೋಟಿ ವರ್ಷಗಳ ಹಿಂದೆ ಡೈನೋಸಾರ್‌ಗಳ ಅಸ್ತಿತ್ವವನ್ನೇ ಅಳಿಸಿಹಾಕಿದ 6 ಮೈಲು ಅಗಲದ ಕ್ಷುದ್ರಗ್ರಹಕ್ಕಿಂತ ಭಿನ್ನವಾಗಿರುವ ಈ 2024 ವೈಆರ್ 4 ಕ್ಷುದ್ರಗ್ರಹವನ್ನು ‘ಸಿಟಿ ಕಿಲ್ಲರ್’ ಎಂದೇ ವರ್ಗೀಕರಿಸಲಾಗಿದೆ. ಅಂದರೆ ಇದು ಒಂದಿಡೀ ನಗರವನ್ನು ವಿನಾಶ ಮಾಡುವಂಥ ಸಾಮರ್ಥ್ಯವನ್ನು ಹೊಂದಿದೆ.