ಕೋಲ್ಕತ್ತಾ : ಕಳೆದ ಅಂದರೆ 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಭದ್ರಕೋಟೆ ನಂದಿಗ್ರಾಮದಲ್ಲಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದು ಗೊತ್ತೇ ಇದೆ. ಇದೀಗ ಐದು ವರ್ಷಗಳ ನಂತರ, ಈ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ಅವರ ತವರು ಕ್ಷೇತ್ರವಾದ ಕೋಲ್ಕತ್ತಾದ ಭವಾನಿಪುರದಲ್ಲಿಯೇ ಅವರಿಗೆ ಸವಾಲೊಡ್ಡಲು ಸಜ್ಜಾಗುತ್ತಿರುವ ಸ್ಪಷ್ಟ ಸುಳಿವುಗಳು ಸಿಗುತ್ತಿವೆ.
ಒಂದು ಕಾಲದಲ್ಲಿ ಆಪ್ತಮಿತ್ರರಾಗಿದ್ದ ಇವರಿಬ್ಬರೂ ಸಿಪಿಎಂ ಅನ್ನು ಅಧಿಕಾರದಿಂದ ಕೆಳಗಿಳಿಸಿದ ನಂದಿಗ್ರಾಮ ಚಳವಳಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಟಿಎಂಸಿ ಉದಯಕ್ಕೆ ಇದು ಪ್ರಮುಖ ಕಾರಣವಾಗಿತ್ತು. ಆದರೆ 2021ರ ಚುನಾವಣೆಗೂ ಮುನ್ನ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಂಡಾಗ, ಮಮತಾ ಬ್ಯಾನರ್ಜಿ ನೇರವಾಗಿ ನಂದಿಗ್ರಾಮದಲ್ಲಿಯೇ ಸ್ಪರ್ಧೆಗೆ ಇಳಿದಿದ್ದರು. ಆ ಹೈವೋಲ್ಟೇಜ್ ಚುನಾವಣೆಯಲ್ಲಿ ಕೇವಲ 2,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಮಮತಾ ಪರಾಭವಗೊಂಡರು. ರಾಜ್ಯದಲ್ಲಿ ಟಿಎಂಸಿ ಗೆದ್ದರೂ ಮಮತಾ ಸೋತಿದ್ದರು. ನಂತರ ಅವರು ಭವಾನಿಪುರ ಉಪಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು, ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡದರು. ಇದೀಗ ನಂದಿಗ್ರಾಮದ ಆ ರೋಚಕ ಕದನ ಭವಾನಿಪುರದಲ್ಲಿ ಮರುಕಳಿಸಲಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಮತದಾರರ ಪಟ್ಟಿ ಪರಿಷ್ಕರಣೆ: ಬಿಜೆಪಿಗೆ ಹೊಸ ಹುಮ್ಮಸ್ಸು
ಭವಾನಿಪುರದಲ್ಲಿ ಬಿಜೆಪಿ ಇಷ್ಟೊಂದು ಆತ್ಮವಿಶ್ವಾಸ ಹೊಂದಲು ಪ್ರಮುಖ ಕಾರಣ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR). ಈ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ಆರು ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, ಭವಾನಿಪುರ ಕ್ಷೇತ್ರದಲ್ಲೇ ಬರೋಬ್ಬರಿ 47,000 ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಪರಿಣಾಮವಾಗಿ, 267 ಬೂತ್‌ಗಳಿರುವ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಲ್ಲಿ ನೋಂದಾಯಿತ ಮತದಾರರ ಸಂಖ್ಯೆ 2,06,295 ರಿಂದ 1,59,201 ಕ್ಕೆ ಕುಸಿದಿದೆ. ಇದಕ್ಕೆ ಹೋಲಿಸಿದರೆ ಸುವೇಂದು ಅವರ ನಂದಿಗ್ರಾಮದಲ್ಲಿ ಕೇವಲ 10,599 ಹೆಸರುಗಳನ್ನು ಮಾತ್ರ ಕೈಬಿಡಲಾಗಿದೆ. ಈ ಅಂಕಿ-ಅಂಶಗಳ ಆಧಾರದ ಮೇಲೆ, 2026ರಲ್ಲಿ ದೀದಿ ತಮ್ಮ ಹಳೆಯ ಭದ್ರಕೋಟೆಯಲ್ಲಿ ಮುಗ್ಗರಿಸಲಿದ್ದಾರೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಭವಾನಿಪುರದಲ್ಲೇ ಸುವೇಂದು ‘ವಾರ್ ರೂಮ್’ ಸ್ಥಾಪನೆ
2011ರಿಂದಲೂ ಭವಾನಿಪುರವು ಮಮತಾ ಬ್ಯಾನರ್ಜಿ ಅವರ ಹಿಡಿತದಲ್ಲೇ ಇದೆ. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತಥಾಗತ ರಾಯ್ ಅವರು ಟಿಎಂಸಿಯ ಸುಬ್ರತಾ ಬಕ್ಷಿ ಅವರಿಗಿಂತ ಭವಾನಿಪುರದ ಕೆಲವು ವಾರ್ಡ್‌ಗಳಲ್ಲಿ 176 ಮತಗಳ ಅಲ್ಪ ಮುನ್ನಡೆ ಸಾಧಿಸಿದ್ದರು. ಇದು ಭವಾನಿಪುರ ಇನ್ನು ಮುಂದೆ ಅಜೇಯ ಟಿಎಂಸಿ ಕೋಟೆಯಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂಬುದು ಬಿಜೆಪಿಯ ವಾದ. ಇದೇ ವಿಶ್ವಾಸದಲ್ಲಿ, ಸುವೇಂದು ಅಧಿಕಾರಿ ಅವರು ಭವಾನಿಪುರದ ವಾರ್ಡ್ ಸಂಖ್ಯೆ 70ರ ಚಕ್ರಬೇರಿಯಾ ರಸ್ತೆಯಲ್ಲಿ ತಮ್ಮದೇ ಆದ ‘ವಾರ್ ರೂಮ್’ (ಚುನಾವಣಾ ತಂತ್ರಗಾರಿಕೆ ಕೊಠಡಿ) ಸ್ಥಾಪಿಸಿದ್ದಾರೆ. ವಿಶೇಷವೆಂದರೆ, 2014ರಲ್ಲಿ ಇದೇ ವಾರ್ಡ್ ಬಿಜೆಪಿಗೆ ಅತಿ ಹೆಚ್ಚು ಮುನ್ನಡೆ ತಂದುಕೊಟ್ಟಿತ್ತು.
“ಭವಾನಿಪುರದಲ್ಲೂ ಮಮತಾರನ್ನು ಸೋಲಿಸುತ್ತೇನೆ”
2026ರ ಚುನಾವಣೆಗೆ ಅಭ್ಯರ್ಥಿ ಯಾರೆಂದು ಬಿಜೆಪಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಕ್ಷೇತ್ರದಾದ್ಯಂತ ಗೋಡೆಗಳ ಮೇಲೆ ಕಮಲದ ಚಿಹ್ನೆಗಳು ಈಗಾಗಲೇ ರಾರಾಜಿಸುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮಾಜಿ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, “ಮಮತಾ ಬ್ಯಾನರ್ಜಿ ಭವಾನಿಪುರದಲ್ಲಿ ಸ್ಪರ್ಧಿಸಿದರೆ, ಅವರ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕೆಂದು ಪಕ್ಷ ನಿರ್ಧರಿಸುತ್ತದೆ. ಸುವೇಂದು ಸೂಕ್ತ ಅಭ್ಯರ್ಥಿ ಎಂದು ಪಕ್ಷ ಭಾವಿಸಿದರೆ, ಖಂಡಿತ ಅವರೇ ಸ್ಪರ್ಧಿಸುತ್ತಾರೆ” ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ಪುಷ್ಟಿ ಸುರಿದಿದ್ದಾರೆ. ಇದರ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರಾಗಿರುವ ಸುವೇಂದು ಅಧಿಕಾರಿ ಕೂಡ ಬಹಿರಂಗ ಸಭೆಗಳಲ್ಲಿ ಹಾಗೂ ಮಾಧ್ಯಮಗಳ ಮುಂದೆ, “ನಾನು ನಂದಿಗ್ರಾಮದಲ್ಲಿ ಅವರನ್ನು ಸೋಲಿಸಿದ್ದೇನೆ, ಈ ಬಾರಿ ಭವಾನಿಪುರದಲ್ಲೂ ಸೋಲಿಸುತ್ತೇನೆ. 20,000 ಮತಗಳ ಅಂತರದಿಂದ ಸೋಲಿಸಿ ಅವರನ್ನು ‘ಮಾಜಿ ಮುಖ್ಯಮಂತ್ರಿ’ಯನ್ನಾಗಿ ಮಾಡುತ್ತೇನೆ” ಎಂದು ನೇರ ಸವಾಲು ಹಾಕಿದ್ದಾರೆ. ಹೀಗಾಗಿ, ಮಮತಾ ಬ್ಯಾನರ್ಜಿ 2026ರಲ್ಲಿ ಮತ್ತೆ ಕ್ಷೇತ್ರ ಬದಲಿಸುತ್ತಾರಾ ಅಥವಾ ಭವಾನಿಪುರದಲ್ಲಿಯೇ ನಿಂತು ಹೋರಾಡುತ್ತಾರಾ ಕಾದುನೋಡಬೇಕಿದೆ.
ಇದನ್ನೂ ಓದಿ : ಖಮೇನಿ ಹತ್ಯೆ | ಕೇಂದ್ರದ ಮೌನದ ಬಗ್ಗೆ ಸೋನಿಯಾ ಗಾಂಧಿ ವಾಗ್ದಾಳಿ.. ಕಾಶ್ಮೀರ ಬೆಂಬಲವನ್ನು ನೆನಪಿಸಿದ ಕಾಂಗ್ರೆಸ್ ನಾಯಕಿ!


















