ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ತನಿಖೆಗೆ ಕೋರ್ಟ್ ಸೂಚಿಸಿದೆ. ಈ ಬೆನ್ನಲ್ಲೇ ಈಗ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಮದ್ಯೆ ತನಿಖೆ ಯಾವ ರೀತಿ ಹೋಗಲಿದೆ? ಸಿಎಂ ರಾಜೀನಾಮೆ ನೀಡುತ್ತಾರಾ? ಅವರು ಅರೆಸ್ಟ್ ಆಗುತ್ತಾರಾ? ಎಂಬ ಚರ್ಚೆಗಳು ಶುರುವಾಗಿವೆ.
ಸಿದ್ದರಾಮಯ್ಯ ಅವರ ಪತ್ನಿ ಸುಮಾರು 56 ಕೋಟಿ ರೂ. ಮೌಲ್ಯದ 14 ಬದಲಿ ನಿವೇಶನಗಳನ್ನು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರು ನೀಡಿದ್ದ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೇ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಹ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. 3 ತಿಂಗಳಲ್ಲಿ ಅಂದರೆ ಡಿಸೆಂಬರ್ 24ರೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಹೀಗಾಗಿ ಸಿಎಂಗೆ ಸಂಕಷ್ಟ ಶುರುವಾಗಿದೆ. ಬಂಧನವಾಗುವ ಸಾಧ್ಯತೆಗಳು ಕೂಡ ಇವೆ ಎನ್ನಲಾಗುತ್ತಿದೆ.
CRPC ಸೆಕ್ಷನ್ 156(3) ಅಡಿ ಕೇಸ್ ರಿಜಿಸ್ಟರ್ ಮಾಡಲು ಆದೇಶ ನೀಡಲಾಗಿದ್ದು, ತನಿಖಾ ವರದಿ ನೀಡಲು 3 ತಿಂಗಳ ಗಡುವು ನೀಡಲಾಗಿದೆ. ಈಗಾಗಲೇ ಕೋರ್ಟ್ ಆದೇಶದ ಪ್ರತಿ ಲೋಕಾಯುಕ್ ಡಿಜಿಗೆ ತಲುಪಿದೆ ಎನ್ನಲಾಗಿದೆ. ಅವರು ಮೈಸೂರು ಎಸ್ಪಿಗೆ ನಿರ್ದೇಶನ ನೀಡುವ ಸಾಧ್ಯತೆ ಇದೆ. ಆನಂತರ ಎಸ್ಪಿ ಅವರು ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಲಿದ್ದಾರೆ. ಆನಂತರ ತನಿಖೆ ಕೈಗೊಳ್ಳಲಿದ್ದಾರೆ.
ತನಿಖೆ ಆರಂಭವಾದರೆ ಸಿಎಂ ಸಿದ್ದರಾಮಯ್ಯ ಅರೆಸ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅವಶ್ಯಕತೆಗೆ ತಕ್ಕಂತೆ ತನಿಖಾಧಿಕಾರಿ ಅಧಿಕಾರ ಬಳಸಬಹುದು. ಹೀಗಾಗಿ ಬಂಧನ ಸೇರಿದಂತೆ ಸಂಪೂರ್ಣ ಅಧಿಕಾರ ತನಿಖಾಧಿಕಾರಿ ಕೈಯಲ್ಲಿರಲಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಾದರೂ ಸಿಎಂ ಬಂಧನವಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.