ಬೆಂಗಳೂರು: ಐಪಿಎಲ್ 2026ರ ಹರಾಜು ಮತ್ತು ತಂಡಗಳ ಬದಲಾವಣೆಯ ನಂತರ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವುದು ಸಂಜು ಸ್ಯಾಮ್ಸನ್ ಅವರ ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ರವೇಶ. ರಾಜಸ್ಥಾನ್ ರಾಯಲ್ಸ್‌ನಿಂದ ಟ್ರೇಡ್ ಮೂಲಕ ಸಿಎಸ್‌ಕೆ ಸೇರಿದ ಸಂಜು, ಎಂ.ಎಸ್. ಧೋನಿ ಅವರ ಉತ್ತರಾಧಿಕಾರಿಯಾಗಿ ವಿಕೆಟ್ ಹಿಂಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.
ಆರ್. ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಈ ಲೆಕ್ಕಾಚಾರವನ್ನೇ ಬದಲಿಸಿದೆ. ಅಶ್ವಿನ್ ಹಂಚಿಕೊಂಡಿರುವ ಚಿತ್ರಗಳಲ್ಲಿ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸದೆ, ಮೈದಾನದ ಹೊರವಲಯದಲ್ಲಿ (Outfield) ಫೀಲ್ಡಿಂಗ್ ಕೋಚ್ ಜೇಮ್ಸ್ ಫಾಸ್ಟರ್ ಮಾರ್ಗದರ್ಶನದಲ್ಲಿ ಹೈ ಕ್ಯಾಚ್‌ಗಳ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. “ಇದು ಕೇವಲ ಸೂಚನೆಯೇ ಅಥವಾ ಆರಂಭಿಕ ಹಂತದ ಅಭ್ಯಾಸವೇ?” ಎಂಬ ಅಶ್ವಿನ್ ಅವರ ಶೀರ್ಷಿಕೆ ಈಗ ಅಭಿಮಾನಿಗಳಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಧೋನಿ ಅವರೇ ಕೀಪರ್ ಆಗಿ ಮುಂದುವರಿಯಲಿದ್ದಾರಾ?
44 ವರ್ಷದ ಎಂ.ಎಸ್. ಧೋನಿ ಅವರ ಐಪಿಎಲ್ ವೃತ್ತಿಜೀವನದ ಅಂತಿಮ ಘಟ್ಟದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಅಶ್ವಿನ್ ಅವರ ಪೋಸ್ಟ್ ಬೇರೆಯದೇ ಕಥೆ ಹೇಳುತ್ತಿದೆ. ಸಂಜು ಸ್ಯಾಮ್ಸನ್ ಅವರನ್ನು ಕೇವಲ ಒಬ್ಬ ಬ್ಯಾಟರ್ ಮತ್ತು ಫೀಲ್ಡರ್ ಆಗಿ ಬಳಸಿಕೊಳ್ಳಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆಯೇ ಎಂಬ ಅನುಮಾನ ಮೂಡಿದೆ. ಧೋನಿ ಅವರೇ ಮತ್ತೊಂದು ಸೀಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸಂಜು ಸ್ಯಾಮ್ಸನ್ ಒಬ್ಬ ಅದ್ಭುತ ಫೀಲ್ಡರ್ ಕೂಡ ಹೌದು. ಮೈದಾನದ ಆಳದಲ್ಲಿ ನಿಂತು ಅತ್ಯದ್ಭುತ ಕ್ಯಾಚ್‌ಗಳನ್ನು ಹಿಡಿಯುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ತಂಡದ ಸಮತೋಲನ ಕಾಯ್ದುಕೊಳ್ಳಲು ಅವರನ್ನು ಔಟ್‌ಫೀಲ್ಡರ್ ಆಗಿ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಸಿಎಸ್‌ಕೆ ರೂಪಿಸಿರಬಹುದು.
ವಿಶ್ವಕಪ್ ಹೀರೋ ಸಂಜು ಮೇಲೆ ಭಾರಿ ನಿರೀಕ್ಷೆ
ಸಂಜು ಸ್ಯಾಮ್ಸನ್ ಅವರು ಕೇವಲ ಒಬ್ಬ ಆಟಗಾರನಾಗಿ ಸಿಎಸ್‌ಕೆ ಸೇರುತ್ತಿಲ್ಲ, ಬದಲಾಗಿ ಟಿ20 ವಿಶ್ವಕಪ್ 2026ರ ‘ಸರಣಿ ಶ್ರೇಷ್ಠ’ (Player of the Tournament) ಎಂಬ ಹೆಗ್ಗಳಿಕೆಯೊಂದಿಗೆ ತಂಡಕ್ಕೆ ಕಾಲಿಡುತ್ತಿದ್ದಾರೆ. ವಿಶ್ವಕಪ್‌ನ ನಿರ್ಣಾಯಕ ಹಂತದಲ್ಲಿ ಸತತ ಮೂರು ಅರ್ಧಶತಕಗಳನ್ನು ಬಾರಿಸಿ ಭಾರತಕ್ಕೆ ಕಪ್ ಗೆದ್ದುಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಂತಹ ಫಾರ್ಮ್‌ನಲ್ಲಿರುವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಸಿಎಸ್‌ಕೆಗೆ ದೊಡ್ಡ ಬಲ ತಂದಿದೆ. ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ 11 ವರ್ಷಗಳ ಸುದೀರ್ಘ ಸಂಬಂಧವನ್ನು ಅಂತ್ಯಗೊಳಿಸಿ, ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರಂತಹ ಸ್ಟಾರ್ ಆಟಗಾರರ ಬದಲಿಗೆ ಸಂಜು ಅವರನ್ನು ಸಿಎಸ್‌ಕೆ ಬರಮಾಡಿಕೊಂಡಿರುವುದು ಅವರ ಮೇಲಿರುವ ವಿಶ್ವಾಸಕ್ಕೆ ಸಾಕ್ಷಿ.
ಮಾರ್ಚ್ 30ರಂದು ಕುತೂಹಲಕ್ಕೆ ತೆರೆ
ಸಂಜು ಸ್ಯಾಮ್ಸನ್ ಅವರ ಪಾತ್ರವೇನು? ಅವರು ವಿಕೆಟ್ ಕೀಪಿಂಗ್ ಮಾಡುತ್ತಾರಾ ಅಥವಾ ಕೇವಲ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ಗೆ ಸೀಮಿತವಾಗುತ್ತಾರಾ? ಎಂಬ ಎಲ್ಲಾ ಪ್ರಶ್ನೆಗಳಿಗೆ ಮಾರ್ಚ್ 30ರಂದು ಉತ್ತರ ಸಿಗಲಿದೆ. ಅಂದು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸಂಜು ಅವರ ಹಳೆಯ ತಂಡವಾದ ರಾಜಸ್ಥಾನ್ ರಾಯಲ್ಸ್ ವಿರುದ್ಧವೇ ಸೆಣಸಲಿದೆ. ಅಶ್ವಿನ್ ನೀಡಿರುವ ಸಣ್ಣ ಸುಳಿವು ನಿಜವಾಗುತ್ತದೆಯೇ ಅಥವಾ ಸಿಎಸ್‌ಕೆ ತನ್ನ ಅಂತಿಮ ಆಟಗಾರರ ಪಟ್ಟಿಯಲ್ಲಿ ಅಚ್ಚರಿಯ ಬದಲಾವಣೆಗಳನ್ನು ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಸಂಜು ಮತ್ತು ಧೋನಿ ಕಾಂಬಿನೇಶನ್ ಕಣದಲ್ಲಿ ಹೇಗೆ ಕೆಲಸ ಮಾಡಲಿದೆ ಎಂಬುದು ಅಭಿಮಾನಿಗಳ ಪಾಲಿಗೆ ಈ ಬಾರಿಯ ದೊಡ್ಡ ಱಕರ್ಷಣೆಯಾಗಿದೆ.
ಇದನ್ನೂ ಓದಿ: ಸನ್‌ರೈಸರ್ಸ್ ಹೈದರಾಬಾದ್ ಪಾಳಯದಲ್ಲಿ ಬಿಸಿಬಿಸಿ ಚರ್ಚೆ : ನಾಯಕ ಕಿಶನ್‌ಗೆ ಸ್ವಂತ ತಂಡದ ಆಟಗಾರನಿಂದಲೇ ‘ಸೆಂಡ್ ಆಫ್’!



















