ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಬಿಸಿಸಿಐ ಸದ್ಯದಲ್ಲಿಯೇ ಹರಾಜಿಗೆ ದಿನಾಂಕ ಪ್ರಕಟಿಸಲಿದೆ. ಈ ಮಧ್ಯೆ ಫ್ರಾಂಚೈಸಿಗಳಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಿರುವ ಸುದ್ದಿ ಹಬ್ಬುತ್ತಿವೆ.
3 ವರ್ಷಗಳಿಗೊಮ್ಮೆ ನಡೆಯುವ ಮೆಗಾ ಹರಾಜಿನಲ್ಲಿ ಯಾವ ಯಾವ ದಿಗ್ಗಜ ಆಟಗಾರರು ಯಾವ ತಂಡ ಸೇರಲಿದ್ದಾರೆ ಎಂಬ ಚರ್ಚೆಗಳು ಶುರುವಾಗುತ್ತವೆ. ಹೀಗಾಗಿಯೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೆಗಾ ಹರಾಜು ವೇಳೆ ಫ್ರಾಂಚೈಸಿಗಳು ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿದ್ದು, ಉಳಿದ ಎಲ್ಲ ಆಟಗಾರರನ್ನು ಬಿಡುಗಡೆಗೊಳಿಸಬೇಕಾಗುತ್ತದೆ. ಹೀಗಾಗಿ ಐದು ಬಾರಿ ಮುಂಬೈ ಇಂಡಿಯನ್ಸ್‌ಗೆ ಟ್ರೋಫಿ ತಂದುಕೊಟ್ಟ ನಾಯಕ ರೋಹಿತ್ ಶರ್ಮಾ (Rohit Sharma) ಈ ಬಾರಿ ಮುಂಬಯಿ ತಂಡಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಹಿಟ್‌ಮ್ಯಾನ್ ಮುಂಬೈ ಇಂಡಿಯನ್ಸ್ ಬಿಟ್ಟು ಗುಜರಾತ್ ಟೈಟಾನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಲಿದ್ದಾರೆ ಎನ್ನಲಾಗುತ್ತಿದೆ. ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah), ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ಸಹ ಮುಂಬೈ ಇಂಡಿಯನ್ಸ್ ತಂಡಕ್ಕೆ ಗುಡ್‌ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.
ಉದ್ಯಮಿ ಗೌತಮ್ ಅದಾನಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಖರೀದಿಸಲಿದ್ದಾರೆ. 4 ಫ್ರಾಂಚೈಸಿಗಳು ತಮ್ಮ ತಂಡದ ನಾಯಕರನ್ನು ಬದಲಾವಣೆ ಮಾಡಲಿವೆ. ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕನಾಗಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದಾರೆ ಎನ್ನಲಾಗುತ್ತಿದೆ. ಆದರೂ ಏನೇನು ಬದಲಾವಣೆಯಾಗುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಷ್ಟೆ.