ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ಅಣಿಯಾಗುತ್ತಿದೆ. ಸದ್ಯ ಐಪಿಎಲ್ ಚುಟುಕು ಕ್ರಿಕೆಟ್ ನಲ್ಲಿ ಬ್ಯುಸಿಯಾಗಿರುವ ಆಟಗಾರರು ಮುಂದಿನ ಕೆಲವು ದಿನಗಳಲ್ಲಿ ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳಬೇಕಿರುವ ಅನಿವಾರ್ಯತೆಯಲ್ಲಿದ್ದಾರೆ. ಮುಂದಿನ ತಿಂಗಳು ಐಪಿಎಲ್ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಬೇಕಿದೆ. ಹಾಗಂತಾ ಅದೂ ಕೂಡ ಟೆಸ್ಟ್ ಸರಣಿಗೆ ಎನ್ನುವುದು ವಿಶೇಷ. ಕೆಲ ಹಿರಿಯ ಆಟಗಾರರನ್ನು ಹೊರತು ಪಡಿಸಿ ಮಧ್ಯಮ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ಸಿಗೋ ಸಾಧ್ಯತೆಗಳಿವೆ.
ಮಧ್ಯಮ ಕ್ರಮಾಂಕಕ್ಕೆ ಬೇಕಿದೆ ಶಿಸ್ತು ಬದ್ಧ ಆಟಗಾರ
ಟೆಸ್ಟ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುವುದು ನಿಶ್ಚಿತವಾಗಿದೆ. ಉಳಿದಂತೆ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಸ್ಥಾನ ಬಹುತೇಕ ಪಕ್ಕಾ. ಉಳಿದಂತೆ ಬುಮ್ರಾ ಸಾರಥ್ಯದಲ್ಲಿ ಬೌಲಿಂಗ್ ಪಡೆ ಸರ್ವಸನ್ನದ್ಧವಾಗಿದೆ. ಈ ನಡುವೆ, ತಂಡದಲ್ಲಿ ಆಲ್ ರೌಂಡರ್ ಸ್ಥಾನವನ್ನು ನಿತೀಶ್ ಕುಮಾರ್ ರೆಡ್ಡಿ ತುಂಬುವುದು ಖಚಿತ. ಆದರೆ, ಬಿಸಿಸಿಐ ಆಯ್ಕೆಗಾರರಿಗೆ ತಲೆನೋವಾಗಿರುವುದು ಮಧ್ಯಮ ಕ್ರಮಾಂಕ. ಈ ಹಂತದಲ್ಲಿ ಇಬ್ಬರು ಶಿಸ್ತು ಬದ್ಧ ಆಟಗಾರರ ಆಯ್ಕೆಗೆ ಪ್ಲ್ಯಾನ್ ಮಾಡಲಾಗುತ್ತಿದೆ. ಆದರೆ, ಈ ಎರಡು ಸ್ಥಾನಕ್ಕೆ 6 ಮಂದಿ ನಡುವೆ ಮೆಗಾ ಫೈಟ್ ನಡೆದಿದೆ.
ಕರುಣ್ ನಾಯರ್ ಗೆ ಖುಲಾಯಿಸುತ್ತಾ ಅದೃಷ್ಟ
ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸಕ್ಕೆ 17 ಜನರ ತಂಡವನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇಂಗ್ಲೆಂಡ್ ಸರಣಿಗೆ 15 ಆಟಗಾರರ ತಂಡವನ್ನಷ್ಟೇ ಆಯ್ಕೆ ಮಾಡಲು ಅಜಿತ್ ಅಗರ್ ಕರ್ ನೇತೃತ್ವದ ಆಯ್ಕೆ ಸಮಿತಿ ಚಿಂತಿಸುತ್ತಿದೆ. ಹೀಗಾಗಿ ತಂಡದ ಮಧ್ಯಮ ಕ್ರಮಾಂಕದ ಒಂದು ಇಲ್ಲವೇ ಇಬ್ಬರು ಆಟಗಾರರಿಗಷ್ಟೇ ಅವಕಾಶವಿದ್ದು ಈ ಸ್ಥಾನಕ್ಕೆ ಅನುಭವಿ ಆಟಗಾರ ಸದ್ಯ ಉತ್ತಮ ಫಾರ್ಮ್ ನಲ್ಲಿರುವ ಕರಣ್ ನಾಯರ್ ಹೆಸರು ಮುಂಚೂಣಿಯಲ್ಲಿದೆ. ಉಳಿದಂತೆ ಸಾಯಿ ಸುದರ್ಶನ್, ರಜತ್ ಪಾಟೀದಾರ್, ಸರ್ಪರಾಜ್ ಖಾನ್, ಶ್ರೇಯಸ್ ಅಯ್ಯರ್, ಕನ್ನಡಿಗ ದೇವದತ್ ಪಡಿಕ್ಕಲ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ವಿಶೇಷ ಅಂದ್ರೆ ಇಂಗ್ಲೆಂಡ್ ಗೆ ಏಕಕಾಲಕ್ಕೆ ಎರಡು ತಂಡಗಳನ್ನು ರವಾನಿಸಬೇಕಿದೆ. ಹಿರಿಯರ ತಂಡದಲ್ಲಿ ಸ್ಥಾನ ಸಿಗದವರಿಗೆ ಈ ಬಾರಿ ಎ ಗುಂಪಿನಲ್ಲಿ ಚಾನ್ಸ್ ಪಕ್ಕಾ. ಏಕಕಾಲಕ್ಕೆ 2 ತಂಡಗಳು ಇಂಗ್ಲೆಂಡ್ ನಲ್ಲಿರೋದ್ರಿಂದ ಹಿರಿಯರ ತಂಡಕ್ಕೆ ಹೆಚ್ಚುವರಿ ಆಟಗಾರರ ಆಯ್ಕೆ ಬೇಡ ಎನ್ನಲಾಗ್ತಿದೆ. ಅನಿವಾರ್ಯತೆ ಬಿದ್ರೆ ಎ ತಂಡದಿಂದ ಆಟಗಾರರನ್ನು ಸೇರಿಸಿಕೊಳ್ಳೋ ಯೋಜನೆಯಿದೆ. ಹೀಗಾಗಿ ಇಂಗ್ಲೆಂಡ್ ಟೂರ್ ಗೆ ಹೊರಡುವ ತಂಡದಲ್ಲಿ ಯಾರಿಗೆ ಜಾಕ್ ಪಾಟ್ ಅನ್ನೋದು ಈಗಿರುವ ಪ್ರಶ್ನೆ.



















