ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮನೆ ಊಟ ಬೇಕೆಂದು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಆಗಸ್ಟ್ 20ರಂದು ನಡೆಯಲಿದೆ.
ಮನೆ ಊಟ, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿಯಲ್ಲಿ ಅವರು ಆರೋಗ್ಯದ ಕಾರಣ ನೀಡಿದ್ದರು. ಇಂದು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ಏಕ ಸದಸ್ಯ ಪೀಠ ನಡೆಸಲಿದೆ.
ಹಿಂದಿನ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈಗಾಗಲೇ ಅಧಿಕಾರಿಗಳು ವರದಿ ಸಲ್ಲಿಸಿದ್ದು, ಹೈಕೋರ್ಟ್ ಏಕ ಸದಸ್ಯ ಪೀಠ ತನ್ನ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ. ಜೈಲು ಅಧಿಕಾರಿಗಳು ಹಾಗೂ ಜೈಲು ವೈದ್ಯಾಧಿಕಾರಿಗಳು ಮನೆ ಊಟದ ಅವಶ್ಯಕತೆ ಇಲ್ಲ ಎಂದೇ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಸುಮಾರು 200 ಕ್ಕೂ ಅಧಿಕ ಸಾಕ್ಷಿಗಳನ್ನು ಕಲೆ ಹಾಕಿದ್ದು ಅವುಗಳಲ್ಲಿ ಸಾಂಧರ್ಭಿಕ ಸಾಕ್ಷಿಗಳು, ಡಿಜಿಟಲ್ ಸಾಕ್ಷಿಗಳು, ಸಿಸಿಟಿವಿ ಫುಟೇಜ್ ಗಳು ಇನ್ನೂ ಕೆಲವು ಹಲವು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಅಲ್ಲದೇ, ಇಲ್ಲಿಯವರೆಗೆ ಶೇ. 70ರಷ್ಟು ಸಾಕ್ಷ್ಯಗಳ ಎಫ್ ಎಸ್ ಎಲ್ ವರದಿಗಳು ಪೊಲೀಸರ ಕೈ ಸೇರಿವೆ. ಇನ್ನುಳಿದ ಸಾಕ್ಷ್ಯಗಳ ಎಫ್ ಎಸ್ ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಉಪಕರಣಗಳು, ಸಿಸಿ ಕ್ಯಾಮೆರಾ, ಆಡಿಯೋ ಸ್ಯಾಂಪಲ್ಸ್, ಮೊಬೈಲ್ ಡೇಟಾ ರಿಪೋರ್ಟ್ ಎಫ್ಎಸ್ ಎಲ್ ವರದಿಗಳು ಮಾತ್ರವೇ ಬರಬೇಕಿದೆ. ಈ ವಾರದಲ್ಲಿ ಈ ವರದಿಗಳು ಕೂಡ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ. ಇದನ್ನು ಗಮನಿಸಿದರೆ, ಇನ್ನು ಕೇವಲ 20 ದಿನಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್ ಆಂಡ್ ಗ್ಯಾಂಗ್ ಗೆ ಸಂಕಷ್ಟ ಶುರುವಾಗಿದೆ. ಈಗಾಗಲೇ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕ್ಯಾಬ್ ಡ್ರೈವರ್ ಅನು ಕುಮಾರ್ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.