ಮುಂಬೈ: ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡಲು ಪರದಾಡುತ್ತಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ, (Rohit Sharma)ಮುಂಬೈ ಪರವಾಗಿ ರಣಜಿ ಪಂದ್ಯ ಆಡುವುದಾಗಿ ಹೇಳಿಕೊಂಡಿದ್ದಾರೆ. ರಣಜಿಯಲ್ಲಿ ಆಡಿ ಅಭ್ಯಾಸ ಮಾಡಿದ ಬಳಿಕ ಟೆಸ್ಟ್ ಸ್ಥಾನ ಉಳಿಸಿಕೊಳ್ಳುವೆ ಎಂಬುದಾಗಿ ಅವರು ಖಚಿತಪಡಿಸಿದ್ದಾರೆ.
ಜಮ್ಮು ಕಾಶ್ಮೀರದ(Jammu Kashmir) ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ (Ranaji Trophy) ಪಂದ್ಯದಲ್ಲಿ ಆಡುವುದಾಗಿ ಅವರು ತಿಳಿಸಿದ್ದಾರೆ. ಜ. 23ರಂದು ಈ ಪಂದ್ಯ ಆರಂಭವಾಗಲಿದೆ. ಆದರೆ, ವರ್ಷಪೂರ್ತಿ ಇರುವ ಕ್ರಿಕೆಟ್ ವೇಳಾಪಟ್ಟಿಯಿಂದ ಆಟಗಾರರಿಗೆ ವಿಶ್ರಾಂತಿ ಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಈ ಮೂಲಕ ಅವರು ತಾವು ರಣಜಿಯಲ್ಲಿ ಪಾಲ್ಗೊಳ್ಳದೇ ಇರುವುದಕ್ಕೆ ಕಾರಣ ಏನೆಂಬುದನ್ನು ತಿಳಿಸಿದರು. ಯಾವ ಆಟಗಾರನೂ ಕೆಂಪು ಬಾಲ್ ಕ್ರಿಕೆಟ್ ಆಡುವುದನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ತಂಡ ಆಯ್ಕೆ ಮಾಡಿದ ಬಳಿಕ ಮುಂಬೈನ ಬಿಸಿಸಿಐ(BCCI) ಮುಖ್ಯ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ಹೀಗೆ ಹೇಳಿದ್ದಾರೆ.
‘ಕಳೆದ 6–7 ವರ್ಷಗಳ ಋತುವನ್ನು ನೋಡಿದರೆ, ನಾವು 45 ದಿನ ಕೂಡ ಮನೆಯಲ್ಲಿ ಇರಲು ಆಗಲಿಲ್ಲ. ಐಪಿಎಲ್ ಮುಗಿದಾಗ ಸ್ವಲ್ಪ ಬಿಡುವು ಸಿಗುತ್ತದೆ ಬಿಟ್ಟರೆ, ಮತ್ತೇನೂ ಆಗುವುದಿಲ್ಲ. ನಮ್ಮ ದೇಶಿ ಕ್ರಿಕೆಟ್‌ನ ಋತು ಅಕ್ಟೋಬರ್‌ನಲ್ಲಿ ಆರಂಭವಾಗಿ ಮಾರ್ಚ್‌ವರೆಗೆ ನಡೆಯುತ್ತದೆ. ಎಲ್ಲಾ ಮಾದರಿಯ ಕ್ರಿಕೆಟ್‌ಗಳಲ್ಲಿ ಆಡದಿರುವ ಆಟಗಾರರು ಈ ವೇಳೆ ದೇಶಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.
37 ವರ್ಷದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಬರ ಅನುಭವಿಸುತ್ತಿದ್ದು, ಕಳೆದ 15 ಇನಿಂಗ್ಸ್‌ನಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಬಾರಿಸಿದ್ದಾರೆ. ಇತ್ತಿಚೆಗೆ ಅಂತ್ಯವಾದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ತಂಡದಿಂದಲೂ ಹೊರಗುಳಿದಿದ್ದರು. ಆ ಬಳಿಕ ಅವರ ನಿವೃತ್ತಿ ವದಂತಿ ಜೋರಾಗಿ ಕೇಳಿ ಬಂದಿತ್ತು.