ಚಿಕ್ಕಮಗಳೂರು: ಕಾಡಾನೆಗಳು ನಾಡಿಗೆ ಬಂದು ಬೀಡು ಬಿಟ್ಟಿರುವುದರಿಂದಾಗಿ ಜಿಲ್ಲೆಯ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತಾಲೂಕಿನ ತುಡುಕೂರು, ಆಲ್ದೂರುಪುರ, ಹೊಸಹಳ್ಳಿ, ತೋರಣಮಾವು ಮತ್ತು ಚಿತ್ತುವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ. ನ. 9ರಂದು ಕಾಫಿ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವನ್ನಪ್ಪಿತ್ತು. ಹೀಗಾಗಿ ಸತ್ತ ಕಾಡಾನೆ ಬಳಿ ಬರೋಬ್ಬರಿ 23 ಕಾಡಾನೆಗಳು ಬೀಡು ಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಲಗದ ಹತ್ತಿರ ಇರುವ 23 ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಸಿಬ್ಬಂದಿ ಪರದಾಡುತ್ತಿದ್ದಾರೆ. ಕಾಡಾನೆಗಳ ಹಿಂಡು ಅರಣ್ಯ ಇಲಾಖೆ ಮತ್ತು ಇಟಿಎಫ್ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾಗುತ್ತಿವೆ. ಕಾಡಾನೆಗಳು ತಾವಾಗಿಯೇ ತೆರಳುವವರೆಗೂ ಸಾವನ್ನಪ್ಪಿದ ಸಲಗದ ಬಳಿ ತೆರಳದಂತೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮೃತಪಟ್ಟ ಆನೆ ಸಕಲೇಶಪುರದಲ್ಲಿ ವಿಕ್ರಾಂತ್ ಎಂದೇ ಖ್ಯಾತಿ ಪಡೆದಿತ್ತು.
ಮೂರು ದಿನಗಳ ಹಿಂದೆ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 24 ಕಾಡಾನೆಗಳ ಹಿಂಡು ಹಳೆ ಆಲ್ದೂರು, ಮಡೆನೆರಲು ಸುತ್ತಮುತ್ತ ಸಂಚರಿಸಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶಗಳ ರೈತರು ಹಾಗೂ ಕಾರ್ಮಿಕರಿಗೆ ಕೆಲಸಕ್ಕೆ ಹೋಗದಂತೆ ಸೂಚಿಸಲಾಗಿದೆ.



















