ಬೆಂಗಳೂರು: ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ಸುಳೇಗಾಳಿ ಗ್ರಾಮದಲ್ಲಿ ಭಾನುವಾರ ವಿದ್ಯುತ್ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವಿಗೀಡಾಗಿರುವ ಬಗ್ಗೆ ನೋವು ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೂಕ್ತ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಇದೇ ಪ್ರದೇಶದಲ್ಲಿ ಆನೆಗಳು ಓಡಾಡುತ್ತಿದ್ದರೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳದೆ, ಕರ್ತವ್ಯ ಲೋಪ ಮಾಡಿರುವುದೇ ಆನೆಗಳ ಸಾವಿಗೆ ಕಾರಣ ಎಂಬ ಆರೋಪವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಲೋಪವಿದ್ದಲ್ಲಿ ಶಿಸ್ತು ಕ್ರಮದ ಶಿಫಾರಸಿನೊಂದಿಗೆ 5 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವರು ಸೂಚಿಸಿದ್ದಾರೆ.
ಬೇಲಿಗೆ ವಿದ್ಯುತ್ ಸಂಪರ್ಕ ನೀಡಿ, ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ರೀತಿ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.
ಘಟನೆ ಬಗ್ಗೆ ಮಾತನಾಡಿದ ಡಿಎಫ್ಒ ಎನ್.ಇ. ಕ್ರಾಂತಿ, “ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಆನೆಗಳು ಸಾವನ್ನಪ್ಪಿವೆ. ಸ್ಥಳಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುತ್ತೇವೆ. ಆನೆಗಳ ಸಾವಿಗೆ ಕಾರಣರಾದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ರೇಣುಕಾಸ್ವಾಮಿ ಕೊಲೆ ಕೇಸ್ | ಡಿ-ಗ್ಯಾಂಗ್‌ಗೆ ಇಂದು ಬಿಗ್ ಡೇ..!



















