ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕನ್ನಾಪುರ ಗ್ರಾಮದ ಸಮೀಪ ಕಾಫಿ ತೋಟಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿದೆ. ಇದರಿಂದ ಕಾರ್ಮಿಕರು ಹಾಗೂ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕನ್ನಾಪುರ ಸಮೀಪದ ಕಾಫಿ ತೋಟವೊಂದರಲ್ಲಿ ಬೀಡು ಬಿಟ್ಟಿರುವ ಕಾಡಾನೆ, ಕಾಫಿ ಗಿಡಗಳಿಗೆ ಹಾನಿ ಮಾಡುತ್ತಿರುವುದು ತಿಳಿದುಬಂದಿದೆ. ಈ ಭಾಗದಲ್ಲಿ ಪ್ರತ್ಯೇಕವಾಗಿ ಎರಡು ಕಾಡಾನೆಗಳು ತೋಟಗಳಲ್ಲಿ ಸಂಚರಿಸುತ್ತಿದ್ದು, ಹಗಲು-ರಾತ್ರಿ ಸಂಚಾರ ಮಾಡುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಕಾಡಾನೆಗಳ ಅಚಾನಕ್ ಓಡಾಟದಿಂದ ತೋಟದ ಕೆಲಸಗಾರರು ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ. ಸ್ಥಳೀಯರು ಮತ್ತು ವಾಹನ ಸವಾರರೂ ಸಹ ಆತಂಕದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕಾಡಾನೆಗಳ ಚಲನ-ವಲನದ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ.
ಘಟನಾ ಸ್ಥಳದಲ್ಲಿ ಆನೆ ನಿಗ್ರಹ ದಳ ಕಾಡಾನೆಗಳ ಚಲನವಲನದ ಮೇಲೆ ನಿಗಾ ವಹಿಸಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಸಾರ್ವಜನಿಕರು ಕಾಡಾನೆಗಳನ್ನು ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಆನೇಕಲ್ | ಅಡ್ಡಾದಿಡ್ಡಿ ಕಾರು ಚಾಲನೆ ; ನಿಂತಿದ್ದ ಬೈಕ್‌ಗಳಿಗೆ ಡಿಕ್ಕಿ



















