ಜಾಜ್‌ಪುರ್: ಒಡಿಶಾದ ಜಾಜ್‌ಪುರ್ ಜಿಲ್ಲೆಯ ಮಲಹಾಟ್ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನಿಂದ ದೂರವಾಗಿ ವಾಸಿಸುತ್ತಿದ್ದ ಪತ್ನಿಯ ಗಂಟಲು ಸೀಳಿ, ಆಕೆಯ ಲಿವ್-ಇನ್ ಸಂಗಾತಿಯ ಜನನಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾನೆ. ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಜರಡಾ ಗ್ರಾಮದ ನಿವಾಸಿ ಮನೋಜ್ ಕುಮಾರ್ ಮೊಹಾಂತಿ ಎಂಬಾತನೇ ಈ ಕೃತ್ಯ ಎಸಗಿದಾತ. ಮನೋಜ್ ತನ್ನ ಪತ್ನಿ ಮತ್ತು ಆಕೆಯ ಲಿವ್ ಇನ್ ಸಂಗಾತಿ ಪ್ರಶಾಂತ್ ನಾಥ್ ಮೇಲೆ ಈ ಭೀಕರ ಕೃತ್ಯವೆಸಗಿದ್ದು, ದಾಳಿಗೊಳಗಾದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆಯ ಗಂಟಲನ್ನು ಕರಾರುವಕ್ಕಾಗಿ ಸೀಳಲಾಗಿದ್ದು, ಆಕೆಯ ಪ್ರಿಯಕರನ ಜನನಾಂಗದ ಭಾಗವನ್ನು ಛಿದ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾಜ್‌ಪುರ್‌ನ ಜಿಲ್ಲಾ ಆಸ್ಪತ್ರೆಯ ವೈದ್ಯರು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ದೃಢಪಡಿಸಿದ್ದಾರೆ.
ವರದಿಗಳ ಪ್ರಕಾರ, ಮಹಿಳೆ ಸುಮಾರು ಒಂದು ವರ್ಷದ ಹಿಂದೆ ಜರಡಾದಲ್ಲಿರುವ ತನ್ನ ಗಂಡನ ಮನೆಯನ್ನು ತೊರೆದು ಪ್ರಶಾಂತ್ ನಾಥ್ ಜೊತೆ ವಾಸವಾಗಿದ್ದಳು. ಇದರಿಂದಾಗಿ ಆಕೆಯ ಮೊದಲ ಗಂಡನ ಕುಟುಂಬದೊಂದಿಗೆ ವೈಷಮ್ಯ ಉಂಟಾಗಿತ್ತು. ಮನೆಯಿಂದ ಹೊರಡುವ ಮೊದಲು ಹಲವು ತಿಂಗಳಿಂದ ಆಕೆಯ ಮೇಲೆ ಮೌಖಿಕ ಮತ್ತು ದೈಹಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಆಕೆ ಆರೋಪಿಸಿದ್ದಳು.
ಪೊಲೀಸರಿಗೆ ನೀಡಿದ ಮೊದಲ ಹೇಳಿಕೆಯಲ್ಲಿ, ತನ್ನ ಮೊದಲ ಗಂಡನ ಕುಟುಂಬವೇ ಈ ದಾಳಿಯ ಹಿಂದಿದೆ ಎಂದು ಮಹಿಳೆ ಆರೋಪಿಸಿದ್ದಾಳೆ. “ನನ್ನ ಅತ್ತೆ-ಮಾವ ಪದೇ ಪದೇ ನನಗೆ ಕಿರುಕುಳ ನೀಡುತ್ತಿದ್ದರು, ಹೊಡೆಯುತ್ತಿದ್ದರು. ಇದರಿಂದ ಬೇಸತ್ತು, ನಾನು ಒಂದು ವರ್ಷದ ಹಿಂದೆ ಇವರೊಂದಿಗೆ (ಪ್ರಶಾಂತ್) ಓಡಿ ಬಂದೆ” ಎಂದು ಸಂತ್ರಸ್ತೆ ಹೇಳಿದ್ದಾರೆ.
ಈಗ ಕುಟುಂಬದ ರಾಜಿ ಸಂಧಾನ ಸಭೆಯ ನೆಪದಲ್ಲಿ ನಮ್ಮಿಬ್ಬರನ್ನು ಮಲಹಾಟ್ ಬಳಿಯ ಕಾಲುವೆ ದಂಡೆಗೆ ಬರುವಂತೆ ಸೂಚಿಸಿದ್ದರು. ನಾವು ಅಲ್ಲಿಗೆ ಹೋದಾಗ ಅನಿರೀಕ್ಷಿತವಾಗಿ ಅವರು ನಮ್ಮನ್ನು ಸುತ್ತುವರಿದರು. ನನ್ನ ಭಾವ ಮತ್ತು ನನ್ನ ಮಾವನ ಅಣ್ಣನ ಮಗ ನಮ್ಮನ್ನು ಕಟ್ಟಿ ಹಾಕಿದರು. ನಂತರ ನಮ್ಮ ಗಂಟಲು ಸೀಳಿ ಕೆಳಗೆ ತಳ್ಳಿದರು, ಎಂದು ಮಹಿಳೆಯು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ತೀವ್ರವಾಗಿ ಗಾಯಗೊಂಡಿದ್ದ ಇವರಿಬ್ಬರನ್ನೂ ನೋಡಿದ ಸ್ಥಳೀಯ ನಿವಾಸಿಗಳು ಅವರನ್ನು ರಕ್ಷಿಸಿ, ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದರು. ಆರೋಪಿ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಲಾಗಿದ್ದು, ಆತನ ಪತ್ತೆಗೆ ಬಲೆಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.