ಚಂಡೀಗಢ: ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಯು ಪತ್ನಿಯ ಜತೆ ಅಕ್ರಮವಾಗಿ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನು ಮನೆಯ ಬಾಡಿಗೆದಾರನನ್ನು ಭೀಕರವಾಗಿ ಕೊಂದ ಘಟನೆ ಹರಿಯಾಣದಲ್ಲಿ ನಡೆದಿದೆ. ಬಾಡಿಗೆದಾರನನ್ನು ಅಪಹರಣ ಮಾಡಿದ ಮನೆಯ ಮಾಲೀಕನು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, 7 ಅಡಿ ಆಳದ ಹೊಂಡದಲ್ಲಿ ಜೀವಂತವಾಗಿ ಮುಳುಗಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ರೋಹ್ಟಕ್ ನಲ್ಲಿರುವ ಬಾಬಾ ಮಸ್ತನಾಥ್ ವಿವಿಯಲ್ಲಿ ಯೋಗ ಪ್ರಾಧ್ಯಾಪಕರಾಗಿರುವ ಜಗದೀಪ್ ಎಂಬುವರೇ ಕೊಲೆಗೀಡಾಗಿದ್ದಾರೆ. ಹರ್ದೀಪ್ ಎಂಬಾತನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗದೀಪ್ ಅವರು ಕಳೆದ ಡಿಸೆಂಬರ್ ನಿಂದಲೇ ನಾಪತ್ತೆಯಾಗಿದ್ದರು. ಆದರೆ, ಮಾರ್ಚ್ 24ರಂದು ಪಂತವಾಸ್ ಎಂಬ ಗ್ರಾಮದಲ್ಲಿ ಜಗದೀಪ್ ಶವ ಪತ್ತೆಯಾಗಿದೆ. ಇದಾದ ಬಳಿಕ ಪೊಲೀಸರು ತನಿಖೆ ನಡೆಸಿದ್ದು, ಕೃತ್ಯ ಬಯಲಾಗಿದೆ.
“ಹರ್ದೀಪ್ ಮನೆಯಲ್ಲಿ ಜಗದೀಪ್ ಅವರು ಬಾಡಿಗೆಗೆ ವಾಸವಿದ್ದರು. ಆದರೆ, ಹರ್ದೀಪ್ ಪತ್ನಿಯ ಜತೆ ಜಗದೀಪ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಹರ್ದೀಪ್ ಗೆ ತಿಳಿದಿದೆ. ಹಾಗಾಗಿ, ಒಂದಷ್ಟು ಜನರಿಗೆ ಸುಪಾರಿ ಕೊಟ್ಟ ಹರ್ದೀಪ್, ಜಗದೀಪ್ ಅವರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ದೂರದ ಪಂತವಾಸ್ ಎಂಬ ಗ್ರಾಮದಲ್ಲಿ 7 ಅಡಿ ಹೊಂಡ ಅಗೆದು, ಜೀವಂತವಾಗಿ ಅದರಲ್ಲಿ ಹೂತುಹಾಕಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಜಗದೀಪ್ ಅವರು ನಾಪತ್ತೆಯಾದ 10 ದಿನಗಳ ಪೊಲೀಸರಿಗೆ ದೂರು ನೀಡಲಾಗಿದೆ. ಇದಾದ ಬಳಿಕ ಪೊಲಿಸರು ತನಿಖೆ ನಡೆಸಿದ್ದು, ಹರ್ದೀಪ್ ಹಾಗೂ ಆತನ ಸಹಚರರೇ ಕೊಲೆ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ದೀಪ್ ಸೇರಿ ಹಲವರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.