ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ್ದ ಪಾಪಿ ಪತಿಯೊಬ್ಬ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ನಡೆದಿದೆ. ಪತ್ನಿ ನವ್ಯಾ(24) ಚಿತ್ರಹಿಂಸೆಯಿಂದ ಕೊಲೆಯಾದ ಮಹಿಳೆ. ಪತಿ ಕಿರಣ್ ಕೊಲೆ ಮಾಡಿದ್ದಾರೆ. ಈ ದಂಪತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಆದರೆ, ಇತ್ತೀಚೆಗೆ ಪತ್ನಿಯ ಮೇಲೆ ಕಿರಣ್ ಅನುಮಾನ ವ್ಯಕ್ತಪಡಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆಗಾಗ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಆದರೆ, ಬುಧವಾರ ಈ ಜಗಳ ವಿಕೋಪಕ್ಕೆ ತೆರಳಿ, ಪತಿ ಕಿರಣ್, ನವ್ಯಾಳನ್ನು ಚೇರ್ ಗೆ ಕಟ್ಟಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಮೂಲದ ಕಿರಣ್ ಕ್ಯಾಬ್ ಚಾಲಕನಾಗಿದ್ದ. ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದ ಮೃತ ನವ್ಯಾ ಕೊರಿಯೊಗ್ರಾಫರ್ ಆಗಿದ್ದರು. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.