ಮಾಜಿ ಕುಲಪತಿ ಮೈಲಾರಪ್ಪನೊಂದಿಗೆ ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಲಾರಿ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಆರೋಪವೊಂದು ಕೇಳಿ ಬಂದಿದೆ.
ನಗರದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೋಮಶೇಖರ್ (45)ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಮಾಜಿ ಕುಲಪತಿ ಮೈಲಾರಪ್ಪ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಸಂಬಂಧಿಕ ನಾಗರಾಜ್ ಈ ಕುರಿತು ಆರೋಪಿಸಿದ್ದಾರೆ. ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಸೋಮಶೇಖರ್ ತಂಗಿಯ ಪತಿ.
ಪ್ರಕರಣದ ಕುರಿತು ಮಾತನಾಡಿರುವ ನಾಗರಾಜ್, ಆತ ತುಂಬಾ ನೊಂದು ಬೆಂದು ಸಾವನ್ನಪ್ಪಿದ್ದಾನೆ. ಆತನ ಪತ್ನಿ ಹಾಗೂ ಮಾಜಿ ಕುಲಪತಿ ಮೈಲಾರಪ್ಪ ಆತ್ಮಹತ್ಯೆಗೆ ಕಾರಣ. ಆತನ ಪತ್ನಿಗೆ ಮಾಜಿ ಕುಲಪತಿ ಮೈಲಾರಪ್ಪನ ಜೊತೆ ಸಂಬಂಧ ಇತ್ತು. ಈ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಮಾಜಿ ಕುಲಪತಿಯ ಪತ್ನಿಗೂ ಈ ವಿಚಾರ ಹೇಳಲಾಗಿತ್ತು. ಆದರೆ, ಮೈಲಾರಪ್ಪ ಇದಕ್ಕೆ ಸುಮ್ಮನಾಗಿರಲಿಲ್ಲ. ಬದಲಾಗಿ ಪತಿಯನ್ನೇ ಬಿಟ್ಟು ಬಾ ಎಂದು ಸೋಮಶೇಖರ್ ನ ಪತ್ನಿಗೆ ಹೇಳಿದ್ದಾನೆ. ಈ ಕುರಿತು ಆಡಿಯೋ ಕೂಡ ಇದೆ ಎಂದು ಆರೋಪಿಸಿದ್ದಾರೆ.
ಆಗ ತಾನೇ ಪಿಯುಸಿ ಮುಗಿಸಿದ್ದ ಪವಿತ್ರಾಳನ್ನು ಸೋಮಶೇಖರ್ ಮದುವೆಯಾಗಿದ್ದ. ಮದುವೆಯಾದ ನಂತರ ಪತ್ನಿ ವಿದ್ಯಾವಂತಳಾಗಲಿ ಎಂಬ ಕಾರಣಕ್ಕೆ ಬಿಕಾಂ ಓದಿಸಿದ್ದ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರು ವಿವಿ ಕುಲಪತಿಯಾಗಿ ಮೈಲಾರಪ್ಪ ಕಾರ್ಯನಿರ್ವಹಿಸುತ್ತಿದ್ದ. ಈ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ಪವಿತ್ರಾ ಕೆಲಸಕ್ಕೆ ಸೇರಿಕೊಂಡಿದ್ದಳು.
ಆಗ ಇಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿದೆ. ಈ ವಿಚಾರ ಗೊತ್ತಾಗಿ ಸೋಮಶೇಖರ್ ಬುದ್ಧಿ ಹೇಳಿದ್ದ. ಮೈಲಾರಪ್ಪ ಹಾಗೂ ಆತನ ಪತ್ನಿಗೆ ಈ ವಿಚಾರ ಹೇಳಿ, ಇದನ್ನು ಇಲ್ಲಿಗೆ ಬಿಟ್ಟು ಬಿಡುವಂತೆ ಸೋಮಶೇಖರ್ ತಿಳಿಸಿದ್ದ. ಇತ್ತೀಚೆಗೆ ಸೋಮಶೇಖರ್ ಮನೆಗೆ ಬಂದು ಪವಿತ್ರಾಗೆ ಮೈಲಾರಪ್ಪ ಪತ್ನಿ ಕೂಡ ವಾರ್ನ್ ಮಾಡಿದ್ದರು.
ಆದರೆ, ಭಾನುವಾರ ತಡರಾತ್ರಿ ಸೋಮಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಪತ್ನಿ ಹಾಗೂ ಮೈಲಾರಪ್ಪ ಕಾರಣ ಎಂದು ಸಂಬಂಧಿ ನಾಗರಾಜ್ ಆರೋಪಿಸಿದ್ದಾರೆ. ಈ ಕುರಿತು ಸೋಮಶೇಖರ್ ಕುಟುಂಬಸ್ಥರು ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಮೈಲಾರಪ್ಪನನ್ನು ಅರೆಸ್ಟ್ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.