ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (RenukaSwamy) ಕೊಲೆ ಪ್ರಕರಣ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೌನ ವಹಿಸಿದ್ದ ಪತ್ನಿ ವಿಜಯಲಕ್ಷ್ಮೀ ಈಗ ಪತಿಯ ಬೆಂಬಲಕ್ಕೆ ನಿಂತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಕಲೆ ಹಾಕುವ ಪ್ರಕ್ರಿಯೆ ನಡೆಯುತ್ತಿದ್ದು ದರ್ಶನ್ ಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪತಿ ದರ್ಶನ್ ನನ್ನು ಶಿಕ್ಷೆಯಿಂದ ತಪ್ಪಿಸಲು ಪತ್ನಿ ವಿಜಯಲಕ್ಷ್ಮಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದ ಅತ್ಯುತ್ತಮ ಕ್ರಿಮಿನಲ್ ಲಾಯರ್ ಗಳಲ್ಲಿ ಒಬ್ಬರಾಗಿರುವ ರವಿ. ಬಿ ನಾಯಕ್ ಅವರನ್ನು ಈಗಾಗಲೇ ವಿಜಯಲಕ್ಷ್ಮೀ ಭೇಟಿ ಮಾಡಿದ್ದಾರೆ.
ರೇಣುಕಾಸ್ವಾಮಿ ಸಾವಿಗೆ ನ್ಯಾಯ ಒದಗಿಸುವುದಕ್ಕಾಗಿ ಈಗಾಗಲೇ ಸರ್ಕಾರದ ಪರ ವಾದ ಮಂಡಿಸಲು ಚಾಣಾಕ್ಷ ವಕೀಲ ಪಿ. ಪ್ರಸನ್ನ ಕುಮಾರ್ ಮುಂದಾಗಿದ್ದಾರೆ. ಈಗಾಗಲೇ ಸರ್ಕಾರಿ ಅಭಿಯೋಜಕರನ್ನಾಗಿ ನಿಯೋಜಿಸಲಾಗಿದೆ. ಇದರ ಬೆನ್ನಲ್ಲಿಯೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಿರಿಯ ವಕೀಲ ರವಿ. ಬಿ ನಾಯಕ್ ಅವರನ್ನು ಭೇಟಿ ಮಾಡಿದ್ದಾರೆ.
ರವಿ ಬಿ. ನಾಯಕ್ ಅವರು ರಾಜ್ಯದ ಅನೇಕ ರಾಜಕಾರಣಿಗಳ, ಉನ್ನತ ವ್ಯಕ್ತಿಗಳ ಪ್ರಕರಣದಲ್ಲಿ ವಾದಿಸಿದ್ದಾರೆ. ರಾಜ್ಯದ ಅತ್ಯುತ್ತಮ ಕ್ರಿಮಿನಲ್ ಲಾಯರ್ ಗಳಲ್ಲಿ ಇವರೂ ಒಬ್ಬರು ಎಂದು ಹೆಸರು ಮಾಡಿದ್ದಾರೆ. ಇಲ್ಲಿಯವರೆಗೂ ದರ್ಶನ್ ಬೆಂಬಲಕ್ಕೆ ಕುಟುಂಬಸ್ಥರು ಯಾರೂ ಬಂದಿಲ್ಲ. ಹೆತ್ತ ತಾಯಿ ಮತ್ತು ಒಡಹುಟ್ಟಿದ ತಮ್ಮ ಸೇರಿ ಕುಟುಂಬ ಎಲ್ಲಾ ಸದಸ್ಯರು ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಇಂದು ಗಂಡನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಪತ್ನಿ ಬಂದಿದ್ದಾರೆ.