ಬೆಳಗಾವಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಮುಂಜಾಗೃತ ಕ್ರಮವಾಗಿ ನಾಲ್ಕು ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೊರ ವಲಯದಲ್ಲಿನ ಬಳ್ಳಾರಿ ನಾಲಾದಲ್ಲಿ ನೀರು ಹೆಚ್ಚಾಗುತ್ತಿದೆ. ಹೀಗಾಗಿ ಬೆಳಗಾವಿ(Belagavi) ಜಿಲ್ಲೆಯ 4 ತಾಲೂಕಿನ ಶಾಲಾ-ಕಾಲೇಜುಗಳಿಗೆ ಜುಲೈ 24ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ಮುಂಜಾಗೃತ ಕ್ರಮವಾಗಿ ನಾಳೆ ಬೆಳಗಾವಿ, ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ದೂದಗಂಗಾ ನದಿ ತುಂಬಿ ಹರಿಯುತ್ತಿದ್ದು, ಜಿಲ್ಲೆಯ ನಿಪ್ಪಾಣಿ ತಾಲೂಕಿನಾದ್ಯಂತ ಪ್ರವಾಹದ ಮುನ್ಸೂಚನೆ ನೀಡಿದೆ.
ಅಲ್ಲದೇ, ಯಾವುದೇ ಕ್ಷಣದಲ್ಲಾದರೂ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆಯಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ರಾತ್ರಿ ಅಲರ್ಟ್ ಇರುವಂತೆ ಎಸ್‌ಪಿ ಸೂಚಿಸಿದ್ದಾರೆ. ಇಂದು ಮತ್ತೆ ಸುಮಾರು ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತವಾಗಿದ್ದು, ಕಬ್ಬು ಮತ್ತು ಭತ್ತದ ಗದ್ದೆಗಳು ನದಿಯಂತೆ ಮಾರ್ಪಟ್ಟಿವೆ. ಇದರಿಂದ ಮತ್ತೆ ರೈತರು ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗೆ ಮಳೆ ಮುಂದುವರೆದರೆ, ರೈತರ ಬದುಕು ಬೀದಿಗೆ ಬಂದು ನಿಲ್ಲುವುದಂತೂ ಸತ್ಯ.


















