ಬೆಂಗಳೂರು: ರಾಜಧಾನಿಯ ಜನ ಸೋಮವಾರ ಮಧ್ಯಾಹ್ನ ಸುರಿದ ವ್ಯಾಪಕ ಮಳೆಗೆ ಹೈರಾಣಾಗಿ ಹೋಗಿದ್ದಾರೆ. ಭಾರಿ ಮಳೆಗೆ ವಿವಿಧೆಡೆ ರಸ್ತೆ, ಅಂಡರ್ ಪಾಸ್ ಗಳು ಜಲಾವೃತಗೊಂಡು ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು.
ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ಮತ್ತಿಕೆರೆ, ಆರ್.ಟಿ.ನಗರ, ವಿಜಯನಗರ, ಸಂಜಯನಗರ, ಶಿವಾಜಿನಗರ, ಹೆಬ್ಬಾಳ್ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು, ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಏಕಾಏಕಿ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು. ಸಂಜಯನಗರದಲ್ಲಿ ನಿಂತಿದ್ದ ಕಾರಿನ ಮೇಲೆ ಮರ ಉರುಳಿ ಬಿದ್ದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆ ಬದಿ ನಿಲ್ಲಿಸಿದ್ದ ಸಿಟ್ರಾನ್ ಕಾರಿನ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ.

ಏಕಾಏಕಿ ಸುರಿದ ಮಳೆಯಿಂದಾಗಿ ವಾಹನ ಸವಾರರು ಕಂಗಾಲಾಗಿದ್ದಾರೆ. ಹಲವೆಡೆ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 30 ಮಿ.ಮೀ. ಮಳೆ ಸುರಿದ ಕಾರಣ ಅಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಅಲ್ಲದೇ, ಕೊಡಿಗೇಹಳ್ಳಿಯಲ್ಲಿ 28 ಮಿಮೀ, ಬಾಣಸವಾಡಿ 18 ಮಿಮೀ, ರಾಜಮಹಲ್ ಗುಟ್ಟಹಳ್ಳಿ 12.5 ಮಿಮೀ ಮಳೆ ದಾಖಲಾಯಿತು ಎಂದು ಸ್ಥಳೀಯಾಡಳಿತ ಸಂಸ್ಥೆಯ ಮೂಲಗಳು ಹೇಳಿವೆ. ಭಾರಿ ಮಳೆಯ ಕಾರಣ ರಸ್ತೆಗಳು ಜಲಾವೃತವಾಗಿ ಹಲವೆಡೆ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದಾಗಿ ಸವಾರರು ಫ್ಲೈ ಓವರ್ ಕೆಳಗೆ ನಿಲ್ಲುವಂತಾಯಿತು.