ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆರಾಯ ಹಲವೆಡೆ ತನ್ನ ಆರ್ಭಟ ತಗ್ಗಿಸಿದ್ದಾನೆ. ಆದರೂ ಮುಂದಿನ ಐದು ದಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಜುಲೈ 14 ರಿಂದ 15 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ, ಜಿಲ್ಲೆಗಳಿಗೆ ಜುಲೈ 13 ಹಾಗೂ 16ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡದ ಮೂಲ್ಕಿಯಿಂದ ಮಂಗಳೂರಿನವರೆಗೆ, ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳದವರೆಗೆ, ಉಡುಪಿಯ ಬೈಂದೂರಿನ ಕಾಪುವರೆಗೆ ಹೈ ವೇವ್ ವಾಚ್ ಅಲರ್ಟ್ ನೀಡಲಾಗಿದೆ. ಈ ಸಂದರ್ಭದಲ್ಲಿ ಸಮುದ್ರದಲ್ಲಿ ಎತ್ತರದ ಅಲೆಗಳು ಏಳಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರ ದಡದ ಬಳಿ ಪ್ರವಾಸಿಗರು ತೆರಳದಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಭಾರೀ ಮಳೆಯು ಮುನ್ಸೂಚನೆ ಇದ್ದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಬೆಳಗಾವಿ, ಕಲಬುರಗಿ, ಯಾದಗಿರಿಯಲ್ಲಿ ಮುಂದಿನ ನಾಲ್ಕು ದಿನ, ರಾಯಚೂರು, ವಿಜಯಪುರ, ಕೊಪ್ಪಳ, ದಾವಣಗೆರೆ, ಹಾಸನ, ಮೈಸೂರಿನಲ್ಲಿ ಜುಲೈ 15 ರಿಂದ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರಿನಲ್ಲಿ ಮುಂದಿನ ಐದು ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.