ತಿರುವನಂತಪುರಂ: ಕೇರಳದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather Department) ನೀಡಿದೆ.
ಈ ಹಿನ್ನೆಲೆಯಲ್ಲಿ ಕೇರಳದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಮಧ್ಯ ಮತ್ತು ಉತ್ತರ ಕೇರಳದಾದ್ಯಂತ ಭಾರೀ ಮಳೆಯಾಗಿದೆ.
ಕೇರಳದಲ್ಲಿ ಪೂರ್ವ ಮುಂಗಾರು ವ್ಯಾಪಕವಾಗುತ್ತಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಚ್ಚಿಯ ಐಟಿ ಟೆಕ್ ಪಾರ್ಕ್ ಜಲಾವೃತ ಗೊಂಡಿದೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಮುಂಭಾಗ ಕೂಡ ಜಲಾವೃತವಾಗಿದೆ. ಅಂಗಡಿಗಳಿಗೂ ನೀರು ನುಗ್ಗಿ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಪಾಲಕ್ಕಾಡ್ ಕಲ್ಲಡಿಕೋಡ್ ಎಂಬಲ್ಲಿ ಸಿಡಿಲು ಬಡಿದು ಮನೆಯ ಮೇಲ್ಛಾವಣಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಕುನ್ನಮಂಗಲಂ: 197 ಮಿ.ಮೀ, ಕುಮರಕೊಂ: 158ಮಿ.ಮೀ, ತೈಕಟ್ಟುಸ್ಸೆರಿ: 156 ಮಿ.ಮೀ, ಪಲ್ಲುರುತಿ: 127ಮಿ.ಮೀ, ಚೂಂಡಿ: 108 ಮಿ.ಮೀ, ತೆನ್ನಾಲ: 107 ಮೀ.ಮೀ., ಪರವೂರು 100 ಮಿ.ಮೀ, ಕಲಮಸ್ಸೆರಿ: 82 ಮಿ.ಮೀ ಹಾಗೂ ಇರಕ್ಕೂರ್: 80 ಮಿ.ಮೀ ಮಳೆಯಾಗಿರುವ ಕುರಿತು ವರದಿಯಾಗಿದೆ.
ಕೇರಳದಲ್ಲಿ ಮಳೆಯ ವ್ಯಾಪಕವಾಗುತ್ತಿದ್ದಂತೆ ಕರ್ನಾಟಕದ 7 ಜಿಲ್ಲೆಗಳಲ್ಲಿ ಕೂಡ ಮಳೆಯ ಎಚ್ಚರಿಕೆ ನೀಡಲಾಗಿದೆ. ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಮೈಸೂರು, ಉಡುಪಿ ಜಿಲ್ಲೆಗಳಿಗೆ ಮಳೆಯಾಗುವ ಸಂಭವವಿದೆ. ಮಿಂಚು ಮತ್ತು ಬಿರುಗಾಳಿ ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.