ಬೆಂಗಳೂರು: ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ಹಳೆಯ 29 ಕಾನೂನುಗಳ ಬದಲಾಗಿ ಹೊಸ ಸಂಹಿತೆಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಹೊಸ ಸಂಹಿತೆಗಳ ಪ್ರಕಾರ, ಒಬ್ಬ ವ್ಯಕ್ತಿಯ ಸಂಬಳದ ಸಿಟಿಸಿಯಲ್ಲ ಶೇ.50ರಷ್ಟು ಮೊತ್ತವು ಬೇಸಿಕ್ ಸಂಬಳ ಇರಬೇಕು ಎಂದು ಸೂಚಿಸಿದೆ. ಇದರಿಂದಾಗಿ ಉದ್ಯೋಗಿಗಳ ಟೇಕ್ ಹೋಮ್ ಸ್ಯಾಲರಿಯಲ್ಲಿ ಕಡಿತವಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಈ ಕುರಿತು ಕೇಂದ್ರ ಸರ್ಕಾರವು ಮಹತ್ವದ ಸ್ಪಷ್ಟನೆ ನೀಡಿದೆ.
ಹೌದು, ಉದ್ಯೋಗಿ ಅಥವಾ ಕಂಪನಿಯು ಹೆಚ್ಚಿನ ಪಿಎಫ್ ಕಡಿತ ಅಥವಾ ಪಿಎಫ್ ಕಡಿತದ ಮೂಲ ವೇತನದ ಮಿತಿಯನ್ನು ಜಾಸ್ತಿ ಮಾಡಿಕೊಂಡರೆ ಮಾತ್ರ ಟೇಕ್ ಹೋಮ್ ಸಂಬಳದಲ್ಲಿ ಕಡಿತವಾಗುತ್ತದೆ. ಇಲ್ಲದಿದ್ದರೆ, ಉದ್ಯೋಗಿಯು ಮೊದಲಿನಷ್ಟೇ ವೇತನವನ್ನು ಪ್ರತಿ ತಿಂಗಳೂ ಪಡೆಯಲಿದ್ದಾರೆ ಎಂದು ತಿಳಿಸಿದೆ. ಇದು ಉದ್ಯೋಗಿಗಳಿಗೆ ಸಿಹಿ ಸುದ್ದಿ ಎನಿಸಿದೆ.
ಕೇಂದ್ರ ಸರ್ಕಾರವು ಉದ್ಯೋಗಿಯ ಪಿಎಫ್ ಕಡಿತದ ಸಂಬಳದ ಮಿತಿಯನ್ನು 15 ಸಾವಿರ ರೂ. ಎಂದು ಘೋಷಿಸಿದೆ. ನೂತನ ಸಂಹಿತೆಗಳು ಜಾರಿಯಾದರೂ ಉದ್ಯೋಗಿ ಹಾಗೂ ಕಂಪನಿಯು 15 ಸಾವಿರ ರೂ. ಮಿತಿಯನ್ನೇ ಮುಂದುವರಿಸಿದರೆ, ಆಗ ಟೇಕ್ ಹೋಮ್ ಸ್ಯಾಲರಿಯಲ್ಲಿ ವ್ಯತ್ಯಾಸ ಆಗುವುದಿಲ್ಲ. ಹೊಸ ಸಂಹಿತೆಗಳ ಅನ್ವಯ ಯಾರ ಟೇಕ್ ಹೋಮ್ ಸಂಬಳವೂ ಕಡಿಮೆಯಾಗುವುದಿಲ್ಲ ಎಂದು ತಿಳಿಸಿದೆ.
ಉದಾಹರಣೆಗೆ, ಒಬ್ಬ ವ್ಯಕ್ತಿಯ ಮಾಸಿಕ ಸಂಬಳ 60 ಸಾವಿರ ರೂ. ಇದೆ ಹಾಗೂ ಬೇಸಿಕ್ ಸಂಬಳವು 20 ಸಾವಿರ ರೂ. ಇದೆ ಎಂದಿಟ್ಟುಕೊಳ್ಳಿ. ಮೂಲ ವೇತನದ 15 ಸಾವಿರ ರೂ. ಮಿತಿಯಂತೆ ಆ ಉದ್ಯೋಗಿಗೆ ಪ್ರತಿ ತಿಂಗಳು 1,800 ರೂ. ಪಿಎಫ್ ಕಡಿತವಾಗುತ್ತದೆ. ಕಂಪನಿಯ 1,800 ರೂ. ಕಡಿತವೆಂದರೂ, ಉದ್ಯೋಗಿಗೆ ಪ್ರತಿ ತಿಂಗಳು 56,400 ರೂ. ಕೈಗೆ ಸಿಗುತ್ತದೆ. ಹೊಸ ಸಂಹಿತೆ ಅನ್ವಯವೂ ಇದೇ ಸಂಬಳ ಸಿಗಲಿದೆ.
ಇದನ್ನೂ ಓದಿ: ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 31 ಹುದ್ದೆ : 1.10 ಲಕ್ಷ ರೂ. ಸಂಬಳ



















