ನವದೆಹಲಿ: ದೆಹಲಿ ಮುಖ್ಯಮಂತ್ರಿಯವರ ಕಚೇರಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಹುತಾತ್ಮ ಭಗತ್ ಸಿಂಗ್ ಅವರ ಭಾವಚಿತ್ರಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ (ಆಪ್), ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಡಾ. ಅಂಬೇಡ್ಕರ್ ಅವರ ಪುಣ್ಯತಿಥಿಯ ಆಸುಪಾಸಿನಲ್ಲೇ ಈ ವಿಷಯ ಮುನ್ನೆಲೆಗೆ ಬಂದಿದ್ದು, ದೆಹಲಿಯಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಆಪ್ ಶಾಸಕರ ಆರೋಪವೇನು?
ಮಾಜಿ ಸಚಿವರು ಹಾಗೂ ಆಪ್ ಶಾಸಕರಾದ ಸೌರಭ್ ಭಾರದ್ವಾಜ್ ಅವರು ಮುಖ್ಯಮಂತ್ರಿಯವರ ಕಚೇರಿ ಮತ್ತು ಅವರ ಅಧಿಕೃತ ನಿವಾಸದಿಂದ ಈ ಇಬ್ಬರು ಮಹಾನ್ ನಾಯಕರ ಫೋಟೋಗಳು ಕಾಣೆಯಾಗಿವೆ ಎಂದು ಆರೋಪಿಸಿದ್ದಾರೆ. “ಅರವಿಂದ್ ಕೇಜ್ರಿವಾಲ್ ಮತ್ತು ಆತಿಶಿ ಅವರ ಆಡಳಿತಾವಧಿಯಲ್ಲಿ ಪ್ರತಿಯೊಂದು ಅಧಿಕೃತ ಫೋಟೋ ಮತ್ತು ವಿಡಿಯೋಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಅವರ ಭಾವಚಿತ್ರಗಳು ಎದ್ದು ಕಾಣುತ್ತಿದ್ದವು. ಆದರೆ, ಈಗಿನ ಸಿಎಂ ರೇಖಾ ಗುಪ್ತಾ ಅವರ ಕಚೇರಿಯಲ್ಲಿ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಮಾತ್ರ ಕಾಣಿಸುತ್ತಿದೆ. ಮಹಾನ್ ನಾಯಕರ ಮೇಲೆ ಏಕಿಷ್ಟು ದ್ವೇಷ?” ಎಂದು ಭಾರದ್ವಾಜ್ ಪ್ರಶ್ನಿಸಿದ್ದಾರೆ.
ಹಳೆಯ ಫೋಟೋಗಳ ಪ್ರದರ್ಶನ:
ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಭಾರದ್ವಾಜ್ ಅವರು ಹಳೆಯ ಮತ್ತು ಹೊಸ ಫೋಟೋಗಳನ್ನು ಹೋಲಿಕೆ ಮಾಡಿ ತೋರಿಸಿದ್ದಾರೆ. ಕೇಜ್ರಿವಾಲ್ ಅಧಿಕಾರದಲ್ಲಿದ್ದಾಗ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳಿದ್ದವು, ಆದರೆ ಈಗಿನ ಚಿತ್ರಗಳಲ್ಲಿ ಅವು ನಾಪತ್ತೆಯಾಗಿವೆ ಎಂದು ಅವರು ದೂರಿದ್ದಾರೆ.
ಬಿಜೆಪಿ ನೇತೃತ್ವದ ದೆಹಲಿ ಸರ್ಕಾರವು ಡಾ. ಅಂಬೇಡ್ಕರ್ ಅವರಿಗೆ ಸೂಕ್ತ ಗೌರವ ನೀಡುತ್ತಿಲ್ಲ ಎಂದು ಆಪ್ ಆರೋಪಿಸಿದೆ. ಈ ಹಿಂದೆಯೂ ಅಂದರೆ ಫೆಬ್ರವರಿ 2025ರಲ್ಲೂ ಇಂತಹದ್ದೇ ವಿಷಯದ ಬಗ್ಗೆ ಆಪ್ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿತ್ತು. ಅಂದು ಕೂಡ ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿತ್ತು. ಇದೀಗ ಮತ್ತೆ ಈ ವಿವಾದ ಮತ್ತೆ ಭುಗಿಲೆದ್ದಿದೆ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರ ಧ್ವಜ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ


















