ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ನಿನ್ನೆಯಿಂದ ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭಿಸಿದ್ದು, ಜೆಡಿಎಸ್ ಜೊತೆ ಮೈತ್ರಿಯಿದ್ದರೂ ಏಕಾಂಗಿಯಾಗಿ ಪ್ರತಿಭಟನೆಗೆ ಮುಂದಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿಯಿದ್ದರೂ ಏಕಾಂಗಿಯಾಗಿ ಬಿಜೆಪಿ ಹೋರಾಟ ಮಾಡುತ್ತಿರುವುದೇಕೆ? ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಏಕಾಂಗಿಯಾಗಿ ಆಖಾಡಕ್ಕೆ ಇಳಿಯಿತಾ ಬಿಜೆಪಿ? ಎಂಬ ಪ್ರಶ್ನೆಗಳು ಈಗ ರಾಜ್ಯದ ಜನರನ್ನು ಕಾಡುತ್ತಿವೆ. ಮೂಲಗಳು ಕೂಡ ಈ ಗೊಂದಲಕ್ಕೆ ಹೌದು ಎನ್ನುತ್ತಿವೆ.
ಜನಾಕ್ರೋಶ ಯಾತ್ರೆಯ ಹಿಂದಿನ ಲೆಕ್ಕಾಚಾರ ಏನು? ಏಕಾಂಗಿಯಾಗಿ ಬಿಜೆಪಿ ಅಖಾಡಕ್ಕೆ ಇಳಿಯಲು ಕಾರಣವಾದರು ಏನು? ಎಂಬುವುದಕ್ಕೆ ಸ್ಪಷ್ಟ ಉತ್ತರವೇ ಹಳೆಯ ಮೈಸೂರು ಭಾಗ.
ಹೌದು. ಬಿಜೆಪಿಯು ಹಳೆಯ ಮೈಸೂರು ಭಾಗದಲ್ಲಿ ಬಲಿಷ್ಠವಾಗಿಲ್ಲ. ಕಳೆದ ಚುನಾವಣೆಯಲ್ಲಿ ಹಳೆಯ ಮೈಸೂರು ಭಾಗದಲ್ಲಿ ಸಂಘಟನೆ ಮಾಡಲು ಹೋಗಿ ಬಿಜೆಪಿ ಎಡವಿದೆ. ಸದ್ಯ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿದೆ. ಈ ಮೈತ್ರಿ ಯಥಾವತ್ತಾಗಿ ಮುಂದುವರೆಯುತ್ತದೋ ಇಲ್ಲವೋ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾವು ಏಕಾಂಗಿಯಾಗಿ ಹೋದರೆ ಮುಂದೆ ಭವಿಷ್ಯಕ್ಕೆ ಒಳ್ಳೆಯದು. ಮೈತ್ರಿಯಲ್ಲಿದ್ದೇವೆ ಎಂಬುವುದನ್ನು ಅರಿತು, ಕಾಲಹರಣ ಮಾಡಿದರೆ, ಮುಂದೆ ಮೈತ್ರಿ ಏನಾದರೂ ಮುರಿದು ಹೋದರೆ, ಸಂಘಟನೆ ಮಾಡಲು ಸಮಯಾವಕಾಶ ಇರುವುದಿಲ್ಲ. ಚುನಾವಣಾ ಹೊಸ್ತಿಲಿನಲ್ಲಿ ಒಂದು ವೇಳೆ ಮೈತ್ರಿಯಾಗದಿದ್ದರೆ ಸಂಘಟನೆ ಮಾಡಲು ಸಾಧ್ಯವಾಗುವುದಿಲ್ಲ.
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈಗಿನಿಂದಲೇ ಹೋರಾಟಕ್ಕೆ ಸಜ್ಜಾಗಬೇಕು ಎಂಬ ಕಾರಣಕ್ಕೆ ಹೈಕಮಾಂಡ್ ನಿರ್ದೇಶನದ ಮೇರೆಗೆ ಬಿಜೆಪಿ ಏಕಾಂಗಿ ಹೋರಾಟ ನಡೆಸುತ್ತಿದೆ.ಏಕಾಂಗಿಯಾಗಿ ಪ್ರತಿ ಕ್ಷೇತ್ರದಲ್ಲೂ ಸಂಘಟನೆ ಮಾಡಿ. ಮೈತ್ರಿ ಮುಂದುವರೆಯಲಿದೆ ಎಂಬುವುದನ್ನೇ ಗಮನದಲ್ಲಿಟ್ಟುಕೊಂಡು ಈಗಿನಿಂದ ಕೈ ಕಟ್ಟಿ ಕೂರುವುದು ಬೇಡ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಈ ಸೂಚನೆಯ ಮೇರೆಗೆ ಹಳೆಯ ಮೈಸೂರು ಭಾಗದಲ್ಲಿ ಏಕಾಂಗಿಯಾಗಿ ಬಿಜೆಪಿ ಹೋರಾಟಕ್ಕೆ ಇಳಿದಿದೆ. ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ ಭಾಗದಲ್ಲಿ ಜನಾಕ್ರೋಶ ಯಾತ್ರೆಯನ್ನು ಏಕಾಂಗಿಯಾಗಿಯೇ ನಡೆಸುತ್ತಿದೆ.